ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪೊಲೀಸ್ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಹೋರಾಟ, ದಂಗೆಗಳು ನಡೆದಿದೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ‘ಕೊಲ್ಲುವುದು ಹೇಗೆ?’ ಎಂದು ಪೊಲೀಸರಿಗೆ ಹೇಳಿಕೊಡುವ ವಿಡಿಯೋ ವೈರಲ್ ಆಗಿದೆ.
ಮೂಲತಃ ಇದು 2017ರಿಂದ ಚಲಾವಣೆಯಲ್ಲಿರುವ ವಿಡಿಯೋ. ಅಮೆರಿಕಾದ ಮಾಜಿ ಆರ್ಮಿ ರೇಂಜರ್, ಪೊಲೀಸ್ ತರಬೇತುದಾರ ಡೇವ್ ಗ್ರಾಸ್‌ಮನ್, “ಕೊಲ್ಲುವುದು ಅಷ್ಟು ದೊಡ್ಡ ವಿಷಯವಲ್ಲ” ಎಂದು ಪೊಲೀಸರಿಗೆ ತರಬೇತಿ ನೀಡುವುದು ವಿಡಿಯೋದಲ್ಲಿ ಕಾಣಬಹುದು.
ಪೊಲೀಸರಿಗೆ ಬೋಧಿಸುವ ಪೊಲೀಸ್ ತರಬೇತುದಾರನ ಆಘಾತಕಾರಿ ಮಾತುಗಳ ವಿಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಸುತ್ತು ಹೊಡೆಯುತ್ತಿದೆ. ಅಮೆರಿಕದ ಘಟನೆ ಇನ್ನೂ ಹಸಿಯಾಗಿರುವಾಗಲೇ ಈ ವಿಡಿಯೋ ಚರ್ಚೆಗೆ ದೊಡ್ಡ ಆಹಾರವಾಗಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಕೆರಳಿಸಿದೆ. ಅನೇಕರು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಏಳು ನಿಮಿಷದ ವಿಡಿಯೋ ಯಾವ ಸಂದರ್ಭದಲ್ಲಿ, ಯಾರನ್ನು ಕೊಲ್ಲುವುದಕ್ಕೆ ಸಂಬಂಧಿಸಿ ತರಬೇತುದಾರ ಮಾತನಾಡಿದ್ದಾರೆ ಎಂಬುದರ ಸ್ಪಷ್ಟತೆ ಕೂಡ ಇಲ್ಲ.