ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸ್ವಾಮಿತ್ವ ಯೋಜನೆಯಡಿ ಇ -ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ.
ರಾಷ್ಟ್ರೀಯ ಪಂಚಾಯಿತಿ ರಾಜ್ ದಿನಾಚರಣೆ ಪ್ರಯುಕ್ತ 4.09 ಲಕ್ಷ ಮಂದಿಗೆ ಸಂಬಂಧಿತ ಆಸ್ತಿ ಮಾಲೀಕತ್ವದ ಇ -ಪ್ರಾಪರ್ಟಿ ಕಾರ್ಡುಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ.
ಗ್ರಾಮೀಣ ಪ್ರದೇಶದ ಜನರಿಗೆ ಆಸ್ತಿಹಕ್ಕು ಕಾರ್ಡ್ ವಿತರಿಸುವ ಯೋಜನೆ ಇದಾಗಿದೆ. ಗ್ರಾಮಠಾಣಾ ಪ್ರದೇಶದ ಆಸ್ತಿಗಳಿಗೆ ನಿಖರವಾದ ಹಕ್ಕು ದಾಖಲೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಅನುಕೂಲವಾಗುತ್ತದೆ. ಅಲ್ಲದೆ, ಸಂಪನ್ಮೂಲ ಸಂಗ್ರಹ ಕೂಡ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಸಾಮಾಜಿಕ-ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತವನ್ನು ಉತ್ತೇಜಿಸುವ ಕೇಂದ್ರ ವಲಯದ ಯೋಜನೆಯಾಗಿ ಕಳೆದ ವರ್ಷ ಏಪ್ರಿಲ್ 24 ರಂದು ಪ್ರಧಾನ ಮಂತ್ರಿ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯಲ್ಲಿ, ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಗಳನ್ನು ಸಮೀಕ್ಷೆ ಮಾಡಿ ನಕ್ಷೆ ಮಾಡಲಾಗುತ್ತದೆ. ಮ್ಯಾಪಿಂಗ್ ಮತ್ತು ಸಮೀಕ್ಷೆಯ ಆಧುನಿಕ ತಂತ್ರಜ್ಞಾನ ಸಾಧನಗಳ ಬಳಕೆಯ ಮೂಲಕ ಗ್ರಾಮೀಣ ಭಾರತವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ.
2020-21ರ ಅವಧಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಆಯ್ದ ಗ್ರಾಮಗಳಲ್ಲಿ ಯೋಜನೆಯ ಪ್ರಾಯೋಗಿಕ ಹಂತವನ್ನು ಜಾರಿಗೆ ತರಲಾಗಿದ್ದು, ಇಂದು ಕಾರ್ಡ್ ವಿತರಿಸಲಾಗುವುದು.