ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂವನ್ನು ಜಾರಿಗೊಳಿಸಿದೆ. ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಆರಂಭವಾಗಿದ್ದು ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಇರಲಿದೆ.
ಈ ಅವಧಿಯಲ್ಲಿ ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಇರಲಿದ್ದು, 4ನೇ ಶನಿವಾರವಾದ ಕಾರಣ ಬ್ಯಾಂಕುಗಳು ಎಂದಿನಂತೆ ರಜೆ ಇರಲಿವೆ. ವಾರಂತ್ಯದ ಲಾಕ್ಡೌನ್ ಜಾರಿಯಲ್ಲಿರುವವರೆಗೆ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳನ್ನು ಶನಿವಾರದಂದು ಮುಚ್ಚಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಅಂಚೆ ಇಲಾಖೆ ನೌಕರರಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣಕ್ಕೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವವರೆಗೆ ಎಲ್ಲಾ ಅಂಚೆ ಕಚೇರಿಗಳನ್ನು ಶನಿವಾರದಂದು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.