ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಇದರ ನಿಯಂತ್ರಣಕ್ಕಾಗಿ ಲಸಿಕೆ ಅಭಿಯಾನವೂ ಸಹ ಚುರುಕು ಪಡೆದುಕೊಂಡಿದೆ. ಈವರೆಗೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದ್ದು, ಮೇ 1ರಿಂದ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಇದರ ಮಧ್ಯೆ ರಾಷ್ಟ್ರೀಯ ರಕ್ತಪೂರಣ ಮಂಡಳಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡ ಕನಿಷ್ಠ 28 ದಿನಗಳವರೆಗೆ ರಕ್ತದಾನ ಮಾಡುವಂತಿಲ್ಲ ಎಂದು ತಿಳಿಸಿದೆ. ಮೊದಲ ಲಸಿಕೆ ಸ್ವೀಕರಿಸುವ ಮುನ್ನ ಹಾಗೂ ಎರಡನೇ ಡೋಸ್ ಪಡೆಯುವ ಒಂದು ವಾರದ ಮುನ್ನ ರಕ್ತದಾನ ಮಾಡಬಹುದು ಎಂದು ಹೇಳಲಾಗಿದೆ.
18 ವರ್ಷ ಮೇಲ್ಪಟ್ಟವರೂ ಲಸಿಕೆ ಪಡೆಯಲು ಇಲ್ಲಿದೆ ಮುಖ್ಯ ಮಾಹಿತಿ, ಬೇಕಿದೆ ಆಧಾರ್ ಸೇರಿ ಅಗತ್ಯ ದಾಖಲೆ
ಸಾಮಾನ್ಯವಾಗಿ 18 ರಿಂದ 45 ವರ್ಷದ ಒಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿದ್ದು, ಮೇ 1ರಿಂದ ಇವರುಗಳಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾದರೆ ದೇಶದಲ್ಲಿ ರಕ್ತದ ಕೊರತೆ ಉಂಟಾಗಬಹುದು ಎಂದು ಹೇಳಲಾಗಿದೆ. ಹೀಗಾಗಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದರೆ ಒಳ್ಳೆಯದು ಎಂಬ ಮಾತುಗಳು ಕೇಳಿಬರುತ್ತಿವೆ.