ಬಳ್ಳಾರಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಜನರು ಕಡ್ಡಾಯವಾಗಿ ಮಾರ್ಗ ಸೂಚಿಗಳನ್ನು ಪಾಲನೆ ಮಾಡಬೇಕು ಇಲ್ಲವಾದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ ಈ ನಿಯಮಗಳ ಪಾಲನೆ ಕೇವಲ ಸಾಮಾನ್ಯ ಜನರಿಗೆ ಮಾತ್ರ… ಜನಪ್ರತಿನಿಧಿಗಳಿಗೆ ಅನ್ವಯವಾಗಲ್ಲ ಎಂಬಂತಾಗಿದೆ ಸಚಿವರುಗಳು ನಡೆದುಕೊಳ್ಳುತ್ತಿರುವ ರೀತಿ.
ಕೋವಿಡ್ ನಿಯಮಗಳನ್ನು ಪಾಲಿಸಿ ಜನರಿಗೆ ಮಾದರಿಯಾಗಬೇಕಾದ ಸಚಿವರುಗಳೇ ಮಾಸ್ಕ್, ದೈಹಿಕ ಅಂತರ, ರ್ಯಾಲಿಗಳಿಗೆ ನಿರ್ಬಂಧ ಸೇರಿದಂತೆ ಯಾವೊಂದು ಕೋವಿಡ್ ನಿಯಮ ಪಾಲನೆ ಮಾಡದೇ ರಾಜಾರೋಷವಾಗಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇಂತದ್ದೊಂದು ಘಟನೆಗೆ ಸಚಿವ ಶ್ರೀರಾಮುಲು ಕಾರಣರಾಗಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ; ಆನ್ ಲೈನ್ ನೋಂದಣಿಗೆ ಇಲ್ಲಿದೆ ಸುಲಭ ಮಾರ್ಗ
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಭರ್ಜರಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಸಚಿವ ಶ್ರೀರಾಮುಲು ಕೊರೊನಾ ನಿಯಮವನ್ನು ಗಾಳಿಗೆ ತೂರಿದ್ದಾರೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 980 ಕೋವಿಡ್ ಪ್ರಕರಣ ಪತ್ತೆಯಾಗಿದ್ದರೂ ಸಚಿವರು ಬೇಜವಾಬ್ದಾರಿ ಮೆರೆದಿದ್ದಾರೆ. ಮಾಸ್ಕ್, ದೈಹಿಕ ಅಂತರ, ಸಾರ್ವಜನಿಕ ಸಭೆ ಸೇರಬಾರದೆಂಬ ನಿಯಮವಿದ್ದರೂ ಯಾವುದಕ್ಕೂ ಬೆಲೆಕೊಡದೇ ಸಾವಿರಾರು ಜನರ ನಡುವೆ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೊರೊನಾ ಸೋಂಕು ಎಗ್ಗಿಲ್ಲದೇ ಹರಡುತ್ತಿದೆ ಎಂಬುದು ಗೊತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.
ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಅವರು ಪ್ರತಿ ದಿನ ಕೊರೊನಾ ನಿಯಮ ಪಾಲನೆಗೆ ಮನವಿ ಮಾಡುತ್ತಿದ್ದರೂ ಕ್ಯಾರೇ ಎನ್ನದ ಮಾಜಿ ಆರೋಗ್ಯ ಸಚಿವರೂ ಆಗಿರುವ ಶ್ರೀರಾಮುಲು ಅವರ ಈ ಬೇಜವಾಬ್ದಾರಿ ನಡೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.