ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಇವೆರಡರಲ್ಲಿ ಯಾವುದೇ ಲಸಿಕೆಯ ಮೊದಲ ಡೋಸ್ ಪಡೆದವರಲ್ಲಿ 21000 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಎರಡೂ ಡೋಸ್ಗಳನ್ನ ಪಡೆದವರ ಪೈಕಿ 5500 ಮಂದಿ ಸೋಂಕಿಗೆ ಒಳಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಂ ಭಾರ್ಗವ್, ಒಟ್ಟು 17,37,178 ಮಂದಿ ಕೋವ್ಯಾಕ್ಸಿನ್ ಎರಡೂ ಡೋಸ್ಗಳಲ್ಲಿ ಪಡೆದವರಲ್ಲಿ 0.04 ಪ್ರತಿಶತ ಹಾಗೂ 1,57,32,754 ಮಂದಿ ಕೋವಿಶೀಲ್ಡ್ ಎರಡೂ ಡೋಸ್ಗಳನ್ನ ಪಡೆದವರಲ್ಲಿ 0.03 ಪ್ರತಿಶತ ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ರು.
ಭಾರ್ಗವ ಅವರು ನೀಡಿದ ಎಲ್ಲಾ ದತ್ತಾಂಶಗಳಿಂದ ಲಸಿಕೆಯ ಬಳಕೆಯಿಂದ ಕೊರೊನಾ ಸೋಂಕು ಹರಡುವ ಪ್ರಮಾಣ ಹಾಗೂ ಕೊರೊನಾ ಸಾವಿನ ಪ್ರಮಾಣ ಮತ್ತು ರೋಗಿಯಲ್ಲಿ ಗಂಭೀರ ಲಕ್ಷಣಗಳು ಕಂಡು ಬರುವ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಈವರೆಗೆ 1.1 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನ ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್ ಪಡೆದ 93 ಲಕ್ಷ ಮಂದಿಯಲ್ಲಿ 4208 (0.04 ಪ್ರತಿಶತ) ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅಂದರೆ ಪ್ರತಿ 10 ಸಾವಿರ ಲಸಿಕೆ ಸ್ವೀಕರಿಸಿದವರಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿದೆ. ಇನ್ನು 17,37,178 ಮಂದಿ ಎರಡೂ ಡೋಸ್ಗಳನ್ನ ಪಡೆದಿದ್ದು ಇದರಲ್ಲಿ 695 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಭಾರ್ಗವ ಹೇಳಿದ್ದಾರೆ.
ಇನ್ನು 11.6 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಯನ್ನ ದೇಶದಲ್ಲಿ ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್ ಪಡೆದವರಲ್ಲಿ 10 ಸಾವಿರ ಮಂದಿಗೆ ಇಬ್ಬರಂತೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇನ್ನು 1,57,32,754 ಮಂದಿ ಕೋವಿಶೀಲ್ಡ್ ಎರಡೂ ಡೋಸ್ಗಳನ್ನ ಪಡೆದಿದ್ದು 5014 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಭಾರ್ಗವ ಮಾಹಿತಿ ನೀಡಿದ್ರು.
ಅಂದರೆ ತೀರಾ ಕಡಿಮೆ ಪ್ರಮಾಣದಲ್ಲಿ ಜನರು ಲಸಿಕೆ ಸ್ವೀಕರಿಸಿದ ಬಳಿಕ ಸೋಂಕಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಲಸಿಕೆಯ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಮೇಯವೇ ಬೇಡ ಎಂದು ಭಾರ್ಗವ ಹೇಳಿದ್ದಾರೆ.