ಮೈಸೂರು: ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರಿ ಹೋಗಿದೆ. ಸರ್ಕಾರ, ಸಚಿವರು ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳುವುದನ್ನು ಬಿಟ್ಟು ಜನರ ಮೇಲೆ ಆರೋಪ ಮಾಡಲು ಮುಂದಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎಂಎಲ್ಸಿ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಹೆಚ್ಚಳಕ್ಕೆ ಜನರೇ ಕಾರಣ ಎಂಬ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರದ ಬೇಜವಾಬ್ದಾರಿ ವರ್ತನೆಗೆ ಮಂತ್ರಿಗಳು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜನರು ಕಾರಣ ಎನ್ನುವುದಾದರೆ ಅಲ್ಲಿಯವರೆಗೆ ನೀವೇನು ಮಾಡುತ್ತಿದ್ದೀರಿ? ಸಿಎಂ ಗೆ ಕೊರೊನಾ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಮೂವರು ಡಿಸಿಎಂ ಗಳು ಏನು ಮಾಡುತ್ತಿದ್ದಾರೆ? ಆರೋಗ್ಯ ಸಚಿವರು ಏನು ಮಾಡುತ್ತಿದ್ದಾರೆ? ಸುಮ್ಮನೇ ಕೂರಲು ಇವರನ್ನು ಡಿಸಿಎಂ, ಮಂತ್ರಿ ಮಾಡಿದ್ದಾ? ರಾಜ್ಯದಲ್ಲಿ ಎಲ್ಲಾ ತೀರ್ಮಾನಗಳನ್ನು ಮುಖ್ಯಮಂತ್ರಿಯೊಬ್ಬರದ್ದೇ ಎಂದ ಮೇಲೆ ಕ್ಯಾಬಿನೆಟ್ ಯಾಕೆ ಬೇಕು? ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರಿಂದ ಸರ್ವಪಕ್ಷ ಸಭೆ: ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ….? ಬಿ ಎಸ್ ವೈ ಮುಕ್ತ ಬಿಜೆಪಿ ಅಭಿಯಾನವೇ…?; ಕಾಂಗ್ರೆಸ್ ಪ್ರಶ್ನೆ
ರಾಜ್ಯದಲ್ಲಿ ಜನರು ಆಕ್ಸಿಜನ್, ಬೆಡ್ ಇಲ್ಲದೇ ಪರದಾಡುತ್ತಿದ್ದಾರೆ. ಇಷ್ಟಾದರೂ ಒಬ್ಬರು ಮಂತ್ರಿ ಹೇಳ್ತಾರೆ ಬೇರೆ ರಾಜ್ಯದ ಪರಿಸ್ಥಿತಿ ನಮ್ಮಲ್ಲಿಲ್ಲ ಎಂದು, ಇನ್ನೊಬ್ಬ ಮಂತ್ರಿ ಹೇಳ್ತಾರೆ ಕೊರೊನಾ ಹೆಚ್ಚಳಕ್ಕೆ ಜನರೇ ಕಾರಣ ಎಂದು ರಾಜ್ಯದಲ್ಲಿ ಈ ಪರಿಸ್ಥಿತಿ ಸಾಲದೇ ಇನ್ನೂ ಬೇರೆ ಪರಿಸ್ಥಿತಿಗಳು ಏನು ಬೇಕು? ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರು ಸಭೆ ಕರೆದಿದ್ದಾರೆ ಎನ್ನಲಾಗಿದೆ. ಚುನಾಯಿತ ಸರ್ಕಾರ ವಿಫಲವಾದಾಗ ಮಾತ್ರ ರಾಜ್ಯಪಾಲರು ಮಧ್ಯಪ್ರವೇಶ ಮಾಡುತ್ತಾರೆ. ಹಾಗಾದರೆ ಈಗಿನ ಪರಿಸ್ಥಿತಿ ನೋಡಿದರೆ ಸರ್ಕಾರ ವಿಫಲವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.