ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಅಪಘಾತದ ಪ್ರಕರಣಗಳಲ್ಲಿ ಉಂಟಾಗುವ ಸಾವಿನ ಪ್ರಮಾಣವನ್ನ ಅರ್ಧದಷ್ಟು ಕಡಿಮೆ ಮಾಡುವ ಗುರಿ ಹೊಂದಿರೋದಾಗಿ ಹೇಳಿದ್ದಾರೆ.
ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟಿ ಹಾಗೂ ಸೇಫ್ಟಿ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ವೆಬ್ನಾರ್ ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತೆಯ ಹೊಸ ಮಾರ್ಗಸೂಚಿಗಳ ಬಗ್ಗೆ ವಿವರಣೆ ನೀಡಿದ್ರು.
ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ, 2025ರ ವೇಳೆ ಈ ಸಾವಿನ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಹಾಗೂ 2030ರ ವೇಳೆಯಲ್ಲಿ ಶೂನ್ಯ ಸಾಧನೆ ಮಾಡುವ ಗುರಿ ಹೊಂದಿದ್ದೇವೆ ಅಂತಂದ್ರು.
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಸ್ವೀಡನ್ನಲ್ಲಿ ನಡೆದ ರಸ್ತೆ ಸುರಕ್ಷತೆ ಕುರಿತ ಮೂರನೇ ಜಾಗತಿಕ ಮಂತ್ರಿ ಸಮ್ಮೇಳನದಲ್ಲಿ ಅಂಗೀಕರಿಸಲ್ಪಟ್ಟ ಸ್ಟಾಕ್ಹೋಮ್ ಘೋಷಣೆಯಡಿಯಲ್ಲಿ 2030ರ ವೇಳೆ ಅಪಘಾತದ ಪ್ರಮಾಣವನ್ನ 50 ಪ್ರತಿಶತದಷ್ಟು ಕಡಿಮೆ ಮಾಡುವ ಗುರಿ ಹೊಂದಿದೆ. ಆದರೆ ಭಾರತದಲ್ಲಿ 2025ರ ವೇಳೆಗೆ ಈ ಸಾಧನೆ ಮಾಡುವ ಗುರಿ ಹೊಂದಿದ್ದೇವೆ ಅಂತಾ ಗಡ್ಕರಿ ಹೇಳಿದ್ರು.
ದೇಶದಲ್ಲಿ 22 ಲಕ್ಷ ಜವಾಬ್ದಾರಿಯುತ ಚಾಲಕರ ಅವಶ್ಯಕತೆ ಇದೆ. ಇದಕ್ಕಾಗಿ ಈಗಾಗಲೇ ತರಬೇತಿ ಕೇಂದ್ರಗಳನ್ನ ತೆರೆಯಲಾಗಿದ್ದು ಈ ಕೇಂದ್ರಗಳ ಮೂಲಕ ಅತ್ಯುತ್ತಮ ಚಾಲಕರನ್ನ ಹೊಂದುವ ಗುರಿ ಇಡಲಾಗಿದೆ. ರಸ್ತೆ ಅಪಘಾತಗಳಲ್ಲಿ 18 ರಿಂದ 45 ವರ್ಷದೊಳಗಿನ 70 ಪ್ರತಿಶತ ಮಂದಿ ಸಾಯುತ್ತಿದ್ದಾರೆ. ಎಂದು ಹೇಳಿದ್ರು.
ಪ್ರಸ್ತುತ ಪ್ರತಿ ವರ್ಷ 13.5 ಲಕ್ಷ ಮಂದಿ ಕೇವಲ ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. 5 ಕೋಟಿ ಮಂದಿ ಗಾಯಗೊಳ್ತಾರೆ ಎಂದು ಗಡ್ಕರಿ ಮಾಹಿತಿ ನೀಡಿದ್ರು.