ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಕೋವಿಡ್ ಪರಿಸ್ಥಿತಿ ಕೈಮೀರಲು ರಾಜ್ಯದ ಜನರ ನಿರ್ಲಕ್ಷ್ಯವೇ ಕಾರಣ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಇಂದು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಗುತ್ತಿದೆ. ಟಫ್ ರೂಲ್ಸ್ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಬೆಡ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಇದು ಯುದ್ಧದ ಸಮಯ. ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಾ ಕೂರುವ ಸಮಯವಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕೊರೊನಾ ನೆಗೆಟಿವ್ ಬಂದರೂ ವಿಚಾರಣೆಗೆ ಹಾಜರಾಗದ ರಮೇಶ್ ಜಾರಕಿಹೊಳಿ
ಪ್ರತಿಷ್ಠೆ ಪ್ರಶ್ನೆ ಇಲ್ಲಿ ಬರಲ್ಲ. ಜನರ ಜೀವ ಉಳಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ವಿಪಕ್ಷಗಳು ಕೆಲ ವಿಷಯ ಹೇಳಿದ್ದಾರೆ. ಅವರ ಹೇಳಿಕೆ ಅಲ್ಲಗಳೆಯುತ್ತಿಲ್ಲ. ಆಕ್ಸಿಜನ್, ಬೆಡ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹಾಗಂತ ಕೋವಿಡ್ ನಿರ್ವಹಣೆ ಸರಿಯಿಲ್ಲ. ಸರ್ಕಾರ ವಿಫಲ ಎಂದಲ್ಲ. ಆದರೆ ಸಾಂಕ್ರಾಮೀಕ ರೋಗ ವೇಗವಾಗಿ ಹರಡುತ್ತಿರುವುದರಿಂದ ಸೂಕ್ತ ಬೆಡ್ ವ್ಯವಸ್ಥೆ ಕಷ್ಟವಾಗಿದೆ. ಮೂಲಭೂತ ಸೌಲಭ್ಯ ಒದಗಿಸಬಹುದು ಆದರೆ ವೈದ್ಯರನ್ನು, ನರ್ಸ್ ಗಳನ್ನು ಸೃಷ್ಟಿಸಲಾಗಲ್ಲ. ಈ ಪರಿಸ್ಥಿತಿಯಲ್ಲಿ ಒಂದಷ್ಟು ಯಕ್ಷಪ್ರಶ್ನೆ, ಸವಾಲುಗಳು ಸರ್ಕಾರದ ಮುಂದಿದೆ. ಎಲ್ಲವನ್ನೂ ನಿಭಾಯಿಸಬೇಕು ವಿಪಕ್ಷಗಳ ಸಹಕಾರ ಮುಖ್ಯ ಎಂದು ಹೇಳಿದರು.
ಇನ್ನು ಪ್ರತಿದಿನ ಪತ್ತೆಯಾಗುವ ಶೇ.70ರಷ್ಟು ಕೋವಿಡ್ ಕೇಸ್ ಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದೆ. ಹಾಗಾಗಿ ಮೊದಲು ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಿದೆ. ಇಲ್ಲವಾದಲ್ಲಿ ಇಲ್ಲಿನ ಜನರು ಬೇರೆ ಜಿಲ್ಲೆಗಳಿಗೆ ಹೋಗುವುದರಿಂದ ಅಲ್ಲಿಯೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದರು.