ಮಂಗಳೂರು: ಹಾವುಗಳನ್ನು ಬರಿಗೈಯಲ್ಲಿ ಹಿಡಿದು ಕಾಡಿಗೆ ಬಿಡುತ್ತಿದ್ದ ಉಪ್ಪಿನಂಗಡಿಯ ಸ್ನೇಕ್ ಮುಸ್ತಾಫ ಅಲಿಯಾಸ್ ಎಂ.ಆರ್. ಮೊಹಮ್ಮದ್ ಮುಸ್ತಾಫ ಅವರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
ಆಟೋ ಚಾಲಕರಾಗಿದ್ದ ಮುಸ್ತಾಫ ಪರೋಪಕಾರಿಯಾಗಿದ್ದರು. ರಾತ್ರಿ ಅಪಘಾತದ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಹಾವು ಹಿಡಿಯುವ ಹವ್ಯಾಸ ಬೆಳೆಸಿಕೊಂಡಿದ್ದ ಅವರು ವಿಷಪೂರಿತ ಹಾವುಗಳನ್ನು ಬರಿಗೈಯಲ್ಲಿ ಹಿಡಿದು ಕಾಡಿಗೆ ಬಿಡುತ್ತಿದ್ದರು. ಅನೇಕ ಸಂಘ,ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಉಪ್ಪಿನಂಗಡಿಯ ಮುಸ್ತಾಫ ಬೆಳ್ತಂಗಡಿ ತಾಲೂಕಿನ ಇಳಂತಿಲ ಸಮೀಪ ಪೆರ್ಲಾಪು ಎಂಬಲ್ಲಿ ಇಮಾಂಸಾಬ್ ಅವರ ಕೋಳಿಗೂಡಿನ ಬಲೆಯೊಳಗೆ ನಾಗರಹಾವು ಸಿಲುಕಿ ಒದ್ದಾಡುವುದನ್ನು ತಿಳಿದು ರಕ್ಷಣೆಗೆ ತೆರಳಿದ್ದಾರೆ. ಬಲೆಯಿಂದ ಹಾವು ಬಿಡಿಸುವ ವೇಳೆ ಏಕಾಏಕಿ ಹಿಡಿತ ಸಡಿಲವಾಗಿ ಅವರ ಕೈಗೆ ಹಾವು ಕಚ್ಚಿದೆ. ಆದರೂ ಎದೆಗುಂದದ ಮುಸ್ತಾಫ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ತಾವೇ ಆಟೋರಿಕ್ಷಾ ಚಾಲನೆ ಮಾಡಿಕೊಂಡು ಹೋಗಿ ನೆಕ್ಕಿಲಾಡಿ ಜಂಕ್ಷನ್ ಬಳಿ ಸ್ನೇಹಿತರ ನೆರವಿನಿಂದ ಆಂಬುಲೆನ್ಸ್ ತರಿಸಿಕೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರದಲ್ಲಿ ಅವರು ಅಸ್ವಸ್ಥರಾಗಿದ್ದು ಮಂಗಳೂರಿಗೆ ತೆರಳುವ ಮಾರ್ಗಮಧ್ಯೆ ಆಂಬುಲೆನ್ಸ್ ನಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅವರು ಸಾಯುವ ಕೆಲವು ಗಂಟೆಗಳ ಮೊದಲು ತಮ್ಮ ಮೊಬೈಲ್ ಸ್ಟೇಟಸ್ ನಲ್ಲಿ ಮೃತದೇಹದ ಫೋಟೋ ಹಾಕಿ ಮರಣದ ಬಗ್ಗೆ ಬರೆದು ಪೋಸ್ಟ್ ಮಾಡಿದ್ದರೆನ್ನಲಾಗಿದೆ.