ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪರಿಸ್ಥಿತಿ ಕೈಮೀರಿ 10 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪ್ರತಿ ದಿನ 13000 ಹೊಸ ಕೇಸುಗಳು ದಾಖಲಾಗಲಿವೆ ಎಂದು ಹೇಳಲಾಗಿದೆ.
ಗುರುವಾರ ಬೆಂಗಳೂರಿನಲ್ಲಿ 10,497 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 5,12,521 ಏರಿಕೆಯಾಗಿದ್ದು, ಇದುವರೆಗೆ 4,35,730 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬರೋಬ್ಬರಿ 71,827 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ ಒಂದೇ ದಿನ 30 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4963 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಭಾರೀ ಹೆಚ್ಚಾಗಿರುವ ಕಾರಣ ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ತತ್ತರಿಸಿಹೋಗಿದ್ದು, ಐಸಿಯು, ವೆಂಟಿಲೇಟರ್ ಕೊರತೆ ಕಂಡುಬಂದಿದೆ. ಐಸಿಯು ಹಾಗೂ ವೆಂಟಿಲೇಟರ್ ಸೌಲಭ್ಯವಿರುವ ಬೆಡ್ ಗಳು ಸಿಗುತ್ತಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಕೃತಕ ಉಸಿರಾಟ ಅಗತ್ಯ ಇರುವ ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಬೆಂಗಳೂರಿನಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆ ಇದ್ದು 570 ಐಸಿಯು, ವೆಂಟಿಲೇಟರ್ ಗಳಿವೆ ಎನ್ನಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 50 ರಷ್ಟು ಮೀಸಲಿಡಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ರಾತ್ರಿ ವಿವಿಧ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಂಕಿತರಿಗೆ ಅಗತ್ಯವಾದ ಚಿಕಿತ್ಸೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.