ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣ ಭಾರಿ ಏರಿಕೆಯಾದ ಕಾರಣ ನೀಟ್-ಪಿಜಿ 2021 ಪರೀಕ್ಷೆಯನ್ನು ಮುಂದೂಡಲಾಗಿದೆ.
ಕೊರೋನಾ ಸೋಂಕು ಏರಿಕೆಯಾಗಿದ್ದರಿಂದ ಏಪ್ರಿಲ್ 18 ರಂದು ನಿಗದಿಯಾಗಿದ್ದ ನೀಟ್-ಪಿಜಿ (ರಾಷ್ಟ್ರೀಯ ಅರ್ಹತಾ ಪ್ರವೇಶ ಪ್ರವೇಶ ಪರೀಕ್ಷೆ – ಸ್ನಾತಕೋತ್ತರ) ಪರೀಕ್ಷೆಯನ್ನು ಮುಂದೂಡಲಾಗಿದೆ.
ನಮ್ಮ ಯುವ ವೈದ್ಯಕೀಯ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದ್ದು, ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಪ್ರಕರಣಗಳ ಹೆಚ್ಚಳದ ಕಾರಣ ಏಪ್ರಿಲ್ 18 ರಂದು ನಡೆಯಬೇಕಿದ್ದ ನೀಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಿದ್ದು, ಮುಂದಿನ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯ ಕೇಳಿಬಂದಿದ್ದು, #postponeneetpg ಮತ್ತು ಇತರ ರೀತಿಯ ಹ್ಯಾಶ್ಟ್ಯಾಗ್ಗಳು ಸಹ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದ್ದವು.
ಇದಲ್ಲದೆ, ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಎಂಬಿಬಿಎಸ್ ವೈದ್ಯರ ಗುಂಪೊಂದು ಸಹ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿದೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, ಫರ್ಸುಲ್ಲಾ ಶಫಿ ಮತ್ತು ಇತರರು ತಮ್ಮ ವಕೀಲ ಪಲ್ಲವಿ ಪ್ರತಾಪ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ಸಿಬಿಎಸ್ಇ 10 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸುವ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡುವ ಇತ್ತೀಚಿನ ನಿರ್ಧಾರವನ್ನು ಉಲ್ಲೇಖಿಸಲಾಗಿದೆ.
ಇನ್ನು ದೇಶದಲ್ಲಿ ಒಂದೇ ದಿನ 2 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ತಿಳಿಸಿದೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 1,40,74,564 ಆಗಿದ್ದು, ಇದರಲ್ಲಿ 14,71,877 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 1,038 ಸೋಂಕಿತರು ಮೃತಪಟ್ಟಿದ್ದಾರೆ. ಇವೆಲ್ಲಾ ಕಾರಣಗಳಿಂದ ಪರೀಕ್ಷೆ ಮುಂದೂಡಲಾಗಿದೆ.