ಮಾಸ್ಕ್ ಹಾಕಿಲ್ಲ ಅಂತಾ ಪೊಲೀಸರು ಸಾರ್ವಜನಿಕರಿಗೆ ದಂಡ ಹಾಕೋದನ್ನ ಕೇಳಿರ್ತೇವೆ. ಆದರೆ ಓಡಿಶಾದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಮಾಸ್ಕ್ ಹಾಕದ್ದಕ್ಕೆ 2000 ರೂಪಾಯಿಯನ್ನ ದಂಡದ ರೂಪದಲ್ಲಿ ಪಾವತಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಪುರಿ ಎಸ್ಪಿ ಡಾ. ಕನ್ವರ್ ವಿಶಾಲ್ ಸಿಂಗ್, ಮಾಸ್ಕ್ ಧರಿಸದ ಕಾರಣಕ್ಕೆ ಪೇದೆಗೆ 2000 ರೂಪಾಯಿ ದಂಡವನ್ನ ವಿಧಿಸಲಾಗಿದೆ. ಜವಾಬ್ದಾರಿಯುತ ನಾಗರಿಕರಾಗಿ ಆ ಪೇದೆ ದಂಡದ ಹಣವನ್ನ ಭರಿಸಿದ್ದಾರೆ. ನಮಗೆ ಜನರ ಆರೋಗ್ಯ ಮುಖ್ಯವಾಗಿದ್ದು ಈ ವಿಚಾರದಲ್ಲಿ ಯಾರಿಗೂ ವಿನಾಯಿತಿ ನೀಡುವ ಮಾತೇ ಇಲ್ಲ. ಮಾಸ್ಕ್ನ್ನು ಎಂದಿಗೂ ಧರಿಸಿ ಇಲ್ಲವಾದಲ್ಲಿ ದಂಡವನ್ನ ಭರಿಸಿ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ ಡ್ರೈವ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಪುರಿ ಜಿಲ್ಲೆಯಲ್ಲಿ 5923 ಮಂದಿಗೆ ದಂಡ ವಿಧಿಸಲಾಗಿದೆ ಎಂದು ಸಿಂಗ್ ಹೇಳಿದ್ರು. ಓಡಿಶಾ ಸಿಎಂ ನವೀನ್ ಪಟ್ನಾಯಕ್ ಶುಕ್ರವಾರ 14 ದಿನಗಳ ಮಾಸ್ಕ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆ ಈ ಅಭಿಯಾನವನ್ನ ನಡೆಸಲಾಗ್ತಿದೆ.