ಬೀದರ್: ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡದೇ ಕೊರೊನಾ ನಿಯಂತ್ರಿಸಲಾಗುವುದು. ಲಾಕ್ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ನಿಯಮ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ಬಗ್ಗೆ ಊಹಾಪೋಹಗಳನ್ನು ಜನ ನಂಬಬಾರದು. ಲಾಕ್ಡೌನ್ ವಿಚಾರವಾಗಿ ರಾಜ್ಯಸರ್ಕಾರಕ್ಕೆ ಸ್ಪಷ್ಟತೆ ಇದೆ. ಲಾಕ್ಡೌನ್ ಜಾರಿಮಾಡದೆ ಕೊರೋನಾ ನಿಯಂತ್ರಣ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬೀದರ್ ಜಿಲ್ಲೆ ಹುಮನಾಬಾದ್ ನಲ್ಲಿ ಅವರು ತಿಳಿಸಿದ್ದಾರೆ. ಜನ ನಿಯಮಗಳನ್ನು ಪಾಲಿಸಿದರೆ ಕೊರೋನಾ ಸೋಂಕು ನಿಯಂತ್ರಿಸಬಹುದು. ಉದ್ದೇಶಪೂರ್ವಕವಾಗಿ ಊಹಾಪೋಹದ ಸುದ್ದಿ ಹರಡಿದರೆ ಕ್ರಮಕೈಗೊಳ್ಳಲಾಗುವುದು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಜಾರಿ ಮಾಡಲ್ಲ ಎಂದು ಹೇಳಿದ್ದಾರೆ.