ಯುಗಾದಿ ಹಬ್ಬದ ಮಾರನೇ ದಿನ ಹೊಸ ತೊಡಕು. ಈ ದಿನದಂದು ಹೆಚ್ಚಿನವರ ಮನೆಯಲ್ಲಿ ಮಾಂಸದ ಅಡುಗೆ ಗ್ಯಾರಂಟಿ. ರಾಜ್ಯದಲ್ಲಿ ಕೊರೋನಾ ಆತಂಕದ ನಡುವೆಯೂ ನಿಯಮ ಉಲ್ಲಂಘಿಸಿ ಮಾಂಸ ಖರೀದಿಗೆ ಜನ ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ.
ಬೆಂಗಳೂರು, ಮೈಸೂರು, ಕೋಲಾರ, ರಾಮನಗರ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ಜನ ಅಂತರ ಕಾಯ್ದುಕೊಳ್ಳದೇ ಮಾಂಸ ಖರೀದಿಗೆ ಮುಗಿ ಬಿದ್ದಿದ್ದಾರೆ. ಮತ್ತೆ ಕೆಲವು ಕಡೆ ಸರತಿ ಸಾಲಿನಲ್ಲಿ ನಿಂತು ನಿಯಮಾನುಸಾರ ಮಾಂಸ ಖರೀದಿಸತೊಡಗಿದ್ದಾರೆ. ಮಾಂಸದಂಗಡಿಗಳಲ್ಲಿ ಜನಜಂಗುಳಿಯೇ ಕಂಡುಬಂದಿದೆ. ಜನ ಹಬ್ಬಕ್ಕೆ ಊರಿಗೆ ಬಂದಿದ್ದು ಮನೆಮಂದಿಯೆಲ್ಲ ಒಟ್ಟಿಗೆ ಸೇರಿರುವುದರಿಂದ ಮಾಂಸದ ಅಡುಗೆ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಯುಗಾದಿ ಹೊಸ ತೊಡಕು ಇರುವುದರಿಂದ ಚಿಕನ್, ಮಾಂಸಕ್ಕೆ ಬೇಡಿಕೆ ಇದ್ದು ದರ ಕೂಡ ಹೆಚ್ಚಾಗಿದೆ. ಕೆಲವು ಕಡೆ ಮಾಂಸ ಕೆಜಿಗೆ 600 ರಿಂದ 750 ರೂ., ಚಿಕನ್ ಕೆಜಿಗೆ 250 ರಿಂದ 260 ರೂ.ವರೆಗೂ ದರ ಇದೆ ಎನ್ನಲಾಗಿದೆ.