ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಗತ್ಯ ವಸ್ತು ಮತ್ತು ಸೇವೆಯ ಹೊರತಾಗಿ ಉಳಿದ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಮೇ 1 ರವರೆಗೆ ಮಹಾರಾಷ್ಟ್ರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗುವುದು. ಹೊಸದಾಗಿ ಕಠಿಣ ನಿರ್ಬಂಧದ ಮಾರ್ಗಸೂಚಿಯನ್ನು ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ.
ಸಿನಿಮಾ ಥೀಯೇಟರ್, ಜಿಮ್, ಕ್ರೀಡಾ ಸಂಕೀರ್ಣ, ಸಿನಿಮಾ, ಧಾರಾವಾಹಿ ಚಿತ್ರೀಕರಣ, ಹೋಟೆಲ್, ರೆಸ್ಟೋರೆಂಟ್ ಬಂದ್ ಇರಲಿದ್ದು,, ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಬಡವರು, ಕೂಲಿ ಕಾರ್ಮಿಕರಿಗೆ 1 ತಿಂಗಳು 3 ಕೆಜಿ ಗೋಧಿ, ಎರಡು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.
ಆದಿವಾಸಿಗಳಿಗೆ 2000 ರೂ., ಕೂಲಿ ಕಾರ್ಮಿಕರಿಗೆ 1500 ರೂ. ನೀಡಲಾಗುವುದು. ಪಡಿತರ ಚೀಟಿ ಹೊಂದಿದವರಿಗೆ ಮೂರು ತಿಂಗಳ ಕಾಲ ಉಚಿತವಾಗಿ ರೇಷನ್ ನೀಡಲಾಗುವುದು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಏಪ್ರಿಲ್ 14 ರಂದು ರಾತ್ರಿ 8 ಗಂಟೆಯಿಂದ ಬ್ರೇಕ್ ದ ಚೈನ್ ಅಭಿಯಾನ ಆರಂಭವಾಗಲಿದೆ. ಸೋಂಕು ತಡೆಗೆ ಸೇನೆಯ ನೆರವನ್ನು ಕೂಡ ಪಡೆಯಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.