ನಾಯಿಗಳನ್ನು ಮಾರುವ ಜಾಹೀರಾತುಗಳನ್ನು ಸಾಮಾನ್ಯವಾಗಿ ಬಹಳ ಕ್ಯೂಟ್ ಆಗಿ ರಚಿಸಲಾಗುತ್ತದೆ. ಮಾರಾಟಕ್ಕಿರುವ ಪ್ರತಿ ಶ್ವಾನದ ನಿಖರ ಮಾಹಿತಿಯೂ ಸಂಭವನೀಯ ಮಾಲೀಕರು ಸುಲಭವಾಗಿ ತಿಳಿಯುವಂತೆ ಇರುತ್ತವೆ ಈ ಜಾಹೀರಾತುಗಳು.
ಈ ಮೂಲಕ ಹೊಸ ಮಾಲೀಕರು ತಾವು ಕೊಂಡ ನಾಯಿ ಮರಿಯನ್ನು ಆರಾಮವಾಗಿ ಸಾಕಲು ನೆರವಾಗುತ್ತವೆ. ಆದ್ದರಿಂತ ಪ್ರತಿಯೊಂದು ತಳಿಯ ನಾಯಿಯ ವರ್ತನೆ, ಆಹಾರ ಪಥ್ಯ, ಮೂಡ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊಡುವುದು ಬಹಳ ಮುಖ್ಯ.
ಆದರೆ ನಿಮ್ಮ ನಾಯಿಯನ್ನು ಬೇರೊಬ್ಬರು ಕೊಂಡು ಸಾಕುವಂತೆ ಮಾಡುವುದು ಸವಾಲಿನ ಕೆಲಸ. ಬಹಳಷ್ಟು ಬಾರಿ ಮಾಲೀಕರು ತಮ್ಮ ನಾಯಿಗಳ ಬಗ್ಗೆ ತಪ್ಪು ಮಾಹಿತಿಯನ್ನು ಜಾಹೀರಾತುಗಳಲ್ಲಿ ಕೊಟ್ಟಿರುತ್ತಾರೆ.
ಆದರೆ ಟೈಫಾನಿ ಫಾರ್ಚುನಾ ಈ ವಿಚಾರದಲ್ಲಿ ಬಲು ಪ್ರಾಮಾಣಿಕ. ತನ್ನ ಪ್ರೀತಿಯ ಛಿಹುವಾಹುವಾ ನಾಯಿಯನ್ನು ದತ್ತು ಪಡೆದು ಸಾಕಲು ಯಾರಾದರೂ ಬರುವರೇ ಎಂದು ಕಾಯುತ್ತಿದ್ದಾರೆ. ಪ್ರಾನ್ಸರ್ ತಳಿಯ ಈ ನಾಯಿಯ ಬಗ್ಗೆ ಈಕೆ ಬಹಳ ಮುಕ್ತವಾಗಿ ಇರುವ ಸಂಗತಿಯನ್ನು ತನ್ನ ಫೇಸ್ಬುಕ್ ಪೇಜ್‌ನಲ್ಲಿ ಹಾಕಿದ್ದಾರೆ.
“ನ್ಯೂರಾಟಿಕ್, ಮನುಷ್ಯರನ್ನು ದ್ವೇಷಿಸುವ, ಪ್ರಾಣಿಗಳನ್ನು ದ್ವೇಷಿಸುವ, ಮಕ್ಕಳನ್ನು ದ್ವೇಷಿಸುವ ನಾಯಿಗಳಿಗೆ ದೊಡ್ಡ ಮಾರುಕಟ್ಟೆ ಇಲ್ಲ. ಆದರೂ ಸಹ ಪ್ರಾನ್ಸರ್‌ನನ್ನು ಖರೀದಿಸಲು ಯಾರಾದರೊಬ್ಬರು ಇದ್ದಾರೆ ಎಂದು ನಾನು ನಂಬಿದ್ದೇನೆ ಏಕೆಂದರೆ ಈತನಿಂದ ನನಗೆ ನನ್ನ ಕುಟುಂಬಕ್ಕೆ ಸಾಕು ಸಾಕಾಗಿ ಹೋಗಿದೆ. ಪ್ರತಿದಿನ ಈತ ಕೊಡುವ ಕಾಟದಿಂದ ಮನೆಯಲ್ಲಿ ನರಕ ಸೃಷ್ಟಿಯಾಗಿದೆ….” ಎಂದು ಈಕೆ ಬರೆದುಕೊಂಡಿದ್ದಾರೆ.
ಇಷ್ಟೆಲ್ಲಾ ಬರೆದ ಬಳಿಕ ಈ ಪ್ರಾನ್ಸರ್ ನಾಯಿಯನ್ನು ದತ್ತು ಪಡೆಯಲಿಚ್ಛಿಸುವವರು ಎಲ್ಲಿಗೆ ಹೋಗಬೇಕೆಂದು ಫಾರ್ಚುನಾ ತನ್ನ ಪೋಸ್ಟ್‌ನ ಕೆಳಗೆ ಬರೆದಿದ್ದಾರೆ.