ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ಎರಡನೇ ಅಲೆ ಆತಂಕ ಸೃಷ್ಟಿಸಿದೆ. ಬಿ .1 .1.7 ಮತ್ತು ಭಾರತದ ಬಿ 1.617 ರೂಪಾಂತರವು ಮಕ್ಕಳಿಗೆ ಸಾಕಷ್ಟು ಅಪಾಯಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ವಯಸ್ಕರಿಗಿಂತ ಮಕ್ಕಳಲ್ಲಿ ಕೊರೊನಾ ಅಪಾಯ ಕಡಿಮೆ. ಆದ್ರೆ ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ತಿದೆ. ಹಾಗೆ ಕೊರೊನಾ ತನ್ನ ಲಕ್ಷಣಗಳನ್ನು ಬದಲಿಸಿದೆ.
ಜ್ವರ, ಜಠರದುರಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ತಿವೆ. ಆರಂಭದಲ್ಲಿ ಮಕ್ಕಳಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ತಿರಲಿಲ್ಲ. ಈ ಕಾರಣಕ್ಕೆ ಪರೀಕ್ಷೆಗಳು ನಡೆದಿರಲಿಲ್ಲ. ಕೊರೊನಾ ಬಂದವರು ಕುಟುಂಬದಲ್ಲಿ ಮಕ್ಕಳಿದ್ದರೆ ಅವರಿಗೆ ಮಾತ್ರ ಪರೀಕ್ಷೆ ಹಾಗೂ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗ್ತಿತ್ತು. ಅನೇಕ ಮಕ್ಕಳಿಗೆ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಎರಡು-ಮೂರು ದಿನಗಳಲ್ಲಿ ಮಕ್ಕಳು ಗುಣಮುಖರಾಗುತ್ತಿದ್ದರು ಎಂದು ತಜ್ಞರು ಹೇಳಿದ್ದಾರೆ.
ಈಗ ಕೊರೊನಾ ರೂಪಾಂತರಗೊಂಡಿದ್ದು, ಅದು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಮಹಾರಾಷ್ಟ್ರದಲ್ಲಿ ಕಂಡುಬರುವ B1.617 ಇದಕ್ಕೆ ಕಾರಣವಿರಬಹುದು ಎಂದು ತಜ್ಞರು ಹೇಳಿದ್ದಾರೆ. ಶಾಲೆಗಳು ಬಂದ್ ಆಗಿವೆ. ಆದ್ರೆ ಮಕ್ಕಳು ಮನೆಯಲ್ಲಿ ಕುಳಿತಿಲ್ಲ. ಮೊದಲಿನಂತೆ ಮಕ್ಕಳನ್ನು ಪಾಲಕರು ಮನೆಯಲ್ಲಿ ಕೂಡಿಹಾಕಿಲ್ಲ. ಪಾಲಕರ ಜೊತೆ ಮಕ್ಕಳು ಹೊರಗೆ ಹೋಗ್ತಿದ್ದಾರೆ, ಮಕ್ಕಳ ಜೊತೆ ಆಟವಾಡ್ತಿದ್ದಾರೆ. ಇದು ಕೂಡ ಕೊರೊನಾ ಮಕ್ಕಳಲ್ಲಿ ವೇಗವಾಗಿ ಹರಡಲು ಕಾರಣವಾಗಿದೆ.
ಮಕ್ಕಳು ಖಂಡಿತವಾಗಿಯೂ ಮೊದಲ ಅಲೆಗಿಂತ ಹೆಚ್ಚು ಲಕ್ಷಣರಹಿತರಾಗುತ್ತಿದ್ದಾರೆ. ಅವರ ಅನಾರೋಗ್ಯದ ತೀವ್ರತೆಯು ಹೆಚ್ಚಾಗಿದೆ. ಮಕ್ಕಳಿಗೆ ಜ್ವರ, ಕೆಮ್ಮು, ಶೀತಕ್ಕಿಂತ ಹೊಟ್ಟೆ ನೋವು ಮತ್ತು ತೀವ್ರ ಅತಿಸಾರ ಕಾಡ್ತಿದೆ. ಇದು ಮೊದಲ ಅಲೆಯಲ್ಲಿ ಕಂಡಿರಲಿಲ್ಲ. ಕಳೆದ ವರ್ಷ, ಎಸ್‌ಆರ್‌ಸಿಸಿ ಆಸ್ಪತ್ರೆಗೆ ಚಿಕಿತ್ಸೆ ಬಂದ ಮಕ್ಕಳಲ್ಲಿ ಸುಮಾರು ಶೇಕಡಾ 5 ರಷ್ಟು ರೋಗಿಗಳು ಕೊರೊನಾ ವೈರಸ್ ಪಾಸಿಟಿವ್ ಆಗಿದ್ದರು. ಆದರೆ ಈ ಬಾರಿ ಶೇಕಡಾ 30 ರಿಂದ 40 ರಷ್ಟು ಮಕ್ಕಳು ಕೊರೊನಾಕ್ಕೆ ಒಳಗಾಗಿದ್ದಾರೆ.