ಭಾರತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಬೆಂಬಲ ಸಿಗ್ತಿದೆ. ಎಲ್ಲವೂ ಡಿಜಿಟಲ್ ರೂಪ ಪಡೆಯುತ್ತಿದೆ. ಮೊದಲಿನಂತೆ ಪ್ರತಿಯೊಂದು ಸೇವೆ ಪಡೆಯಲು ಆಯಾ ಕಚೇರಿಗೆ ಅಲೆಯಬೇಕಾಗಿಲ್ಲ. ಪೋಸ್ಟ್ ಲೈಫ್ ಇನ್ಶುರೆನ್ಸ್, ಗ್ರಾಮೀಣ ಜೀವ ವಿಮೆಯ ಪ್ರೀಮಿಯಂ ಲೆಕ್ಕಾಚಾರ, ಅಂಚೆ ಕಚೇರಿ ಹೂಡಿಕೆಯ ಲಾಭ, ಲೈಫ್ ಸರ್ಟಿಫಿಕೇಟ್ ಮತ್ತು ಹತ್ತಿರದ ಪೋಸ್ಟ್ ಆಫೀಸ್ ಬಗ್ಗೆ ತಿಳಿದುಕೊಳ್ಳಲು ಮೊಬೈಲ್ ಫೋನ್ ನಲ್ಲಿ ಒಂದು ಕ್ಲಿಕ್ ಮಾಡಿದ್ರೆ ಸಾಕು.
ಅಂಚೆ ಇಲಾಖೆ ಪೋಸ್ಟ್ ಇನ್ಫೊ ಎಂಬ ಮೊಬೈಲ್ ಅಪ್ಲಿಕೇಷನ್ ಹೊಂದಿದೆ. ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಡೌನ್ಲೋಡ್ ಮಾಡಬಹುದು. ಡೌನ್ಲೋಡ್ ಮಾಡಿದ ನಂತ್ರ 8 ರೀತಿಯ ಆಯ್ಕೆಗಳು ಸಿಗುತ್ತವೆ. ಇದರಲ್ಲಿ ಅಂಚೆ ಕಚೇರಿ ಹುಡುಕಾಟ, ಸೇವಾ ವಿನಂತಿ, ವಿಮಾ ಪೋರ್ಟಲ್, ಬಡ್ಡಿ ಕ್ಯಾಲ್ಕುಲೇಟರ್ ಇತ್ಯಾದಿಗಳು ಕಾಣಿಸುತ್ತವೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಮಾಹಿತಿ ಪಡೆಯಬಹುದು.
ವಿಮಾ ಪೋರ್ಟಲ್ ಆಯ್ಕೆಯನ್ನು ಕ್ಲಿಕ್ ಮಾಡಿ, ಪಾಲಿಸಿಯನ್ನು ಅಂಚೆ ಕಚೇರಿಯಿಂದ ಖರೀದಿಸಬಹುದು. ಪಿಎಲ್ಐ ಆರ್ಪಿಎಲ್ಐ ಪ್ರೀಮಿಯಂ ಎರಡು ವಿಭಿನ್ನ ಆಯ್ಕೆಗಳನ್ನು ಹೊಂದಿದೆ. ಸಾರ್ವಜನಿಕರು ಆರ್ಪಿಎಲ್ಐ ಆಯ್ಕೆಯನ್ನು ಆರಿಸಬೇಕು. ಯಾಕೆಂದ್ರೆ ಪಿಎಲ್ಐ ಯೋಜನೆ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ. ಇದಲ್ಲದೆ ಇದರ ಅರ್ಹತೆಯ ಬಗ್ಗೆಯೂ ಪೋರ್ಟಲ್ ನಲ್ಲಿ ಮಾಹಿತಿ ನೀಡಲಾಗಿದೆ.
ಬಡ್ಡಿ ಕ್ಯಾಲ್ಕುಲೇಟರ್ನಲ್ಲಿ, ಹೂಡಿಕೆಯ ಲಾಭದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಇದರಲ್ಲಿ ಪ್ರಸ್ತುತ ಬಡ್ಡಿದರದ ಬಗ್ಗೆ, ಠೇವಣಿಯ ಅವಧಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ, ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಉಳಿತಾಯ ಖಾತೆ ಬಗ್ಗೆ ಮಾಹಿತಿ ಲಭ್ಯವಿದೆ.