ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸಂಪೂರ್ಣ ಜಾರಿಮಾಡುವ ಮಾತುಕತೆ ನಡೆಯುತ್ತಿದೆ. ಇದರಿಂದಾಗಿ ಕೂಲಿಕಾರ್ಮಿಕರು ಊರಿಗೆ ಹೋಗಲು ನೂಕುನುಗ್ಗಲಲ್ಲಿ ಹೊರಟಿದ್ದು ರೈಲು ನಿಲ್ದಾಣಗಳಲ್ಲಿ ಜನಸಾಗರವೇ ನೆರೆದಿದೆ.
ಕೊರೋನಾ ಸೋಂಕು ತಡೆಯಲು ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಳೆದ ವಾರದಿಂದ ಮುಂಬೈನ ಔಟ್ ಸ್ಟೇಶನ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬೇಸಿಗೆ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಆದರೆ, ಸಂಪೂರ್ಣವಾಗಿ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಊರಿನತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಮುಂಬೈನ ಔಟ್ ಸ್ಟೇಶನ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಹೆಚ್ಚಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಹೆಚ್ಚಿನ ಸಂಖ್ಯೆಯ ಜನರು ಹಬ್ಬ, ಬೇಸಿಗೆ ಇತರ ಕಾರಣಗಳಿಂದಾಗಿ ತಮ್ಮ ಸ್ಥಳೀಯ ಸ್ಥಳಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಕೊರೋನಾ ಉಲ್ಬಣ ಜೊತೆಗೆ ಉತ್ತರಪ್ರದೇಶದಲ್ಲಿ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಆ ರಾಜ್ಯದ ಬಹುತೇಕರು ತೆರಳಿದ್ದಾರೆ. ಕೆಲವು ವಲಸೆ ಕಾರ್ಮಿಕರು ಕೂಡ ಊರಿನತ್ತ ತೆರಳುತ್ತಿದ್ದಾರೆ.
ಜನ ಪ್ಯಾನಿಕ್ ಆಗಿ ಈ ರೀತಿ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಪ್ಯಾನಿಕ್ ಬುಕಿಂಗ್ ತಪ್ಪಿಸಲು ರೈಲ್ವೆ ಆಡಳಿತದಿಂದ ಜನರಿಗೆ ಮನವಿ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ.
ಟಿಕೆಟ್ ಕಾಯ್ದಿರಿಸುವಿಕೆಯನ್ನು ದೃಢೀಕರಿಸಿಕೊಂಡ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅನುಮತಿ ನೀಡಲಾಗುತ್ತಿದೆ ಎಂದು ಸುತಾರ್ ಹೇಳಿದ್ದಾರೆ.