ದಿನ ಕಳೆದಂತೆ ದೇಶದ ಕೊರೊನಾ ಪರಿಸ್ಥಿತಿ ಹದಗೆಡುತ್ತಿದೆ. ಕೊರೊನಾ ರೋಗದ ಎರಡನೇ ಅಲೆ ವಿರುದ್ಧ ಹೋರಾಡಲು ಹೆಣಗಾಡುವಂತಾಗಿದೆ. ಕೊರೊನಾದ ಹೊಸ ಲಕ್ಷಣಗಳು ಕಾಣಿಸಿಕೊಳ್ತಿದ್ದು, COVID Tongue ಎಂದು ಕರೆಯಲಾಗುತ್ತಿದೆ.
ಕೊರೊನಾ ಎರಡನೇ ಅಲೆ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಎಲ್ಲಾ ವಯಸ್ಸಿನ ಜನರಿಗೆ ಸೋಂಕು ತಗುಲುತ್ತಿದೆ. ದಿನಕ್ಕೊಂದು ಲಕ್ಷಣಗಳು ಕಾಣಿಸಿಕೊಳ್ತಿದ್ದು, ಜನರು ಆತಂಕಗೊಂಡಿದ್ದಾರೆ. ಆರಂಭದಲ್ಲಿ ಒಣ ಕೆಮ್ಮು, ಜ್ವರ, ಉಸಿರಾಟದ ತೊಂದರೆಯಂತ ಲಕ್ಷಣಗಳಿದ್ದವು. ನಂತ್ರ ಹೊಟ್ಟೆ ನೋವು, ಸುಸ್ತಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈಗ ಮತ್ತೊಂದಿಷ್ಟು ಲಕ್ಷಣಗಳನ್ನು ಪತ್ತೆ ಹಚ್ಚಲಾಗಿದೆ.
ಕೊರೊನಾದಿಂದ ದೇಹವು ಲಾಲಾರಸವನ್ನು ಉತ್ಪಾದಿಸಲು ವಿಫಲವಾಗುತ್ತದೆ. ಈ ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಆಹಾರವನ್ನು ಅಗಿಯಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಮಾತನಾಡಲು ಕಷ್ಟವಾಗಬಹುದು. ಲಂಡನ್ನ ಕಿಂಗ್ಸ್ ಕಾಲೇಜಿನ ಅಧ್ಯಾಪಕರಲ್ಲಿ ಒಬ್ಬರಾದ ಪ್ರೊಫೆಸರ್ ಟಿಮ್ ಸ್ಪೆಕ್ಟರ್ ಇದನ್ನು ಬಹಿರಂಗಪಡಿಸಿದ್ದಾರೆ.
ಕೊರೊನಾದ ಮೊದಲಿನ ಲಕ್ಷಣಗಳು ಇಲ್ಲದಿರುವ ಜನರಿಗೂ ಕೊರೊನಾ ಕಾಣಿಸಿಕೊಂಡಿದೆ. ಚರ್ಮದ ದದ್ದುಗಳಂತ ಲಕ್ಷಣ ಕಂಡು ಬಂದಿದೆ. ನಾಲಿಗೆ ಹಾಗೂ ಬಾಯಿಯೊಳಗೆ ಹುಣ್ಣುಗಳು ಕಾಣಿಸಿಕೊಂಡಿವೆ. ತಲೆ ನೋವು, ಆಯಾಸದ ಜೊತೆ ಈ ಸಮಸ್ಯೆ ಕಾಡಿದರೆ ಮನೆಯಲ್ಲಿಯೇ ಬಂಧಿಯಾಗಿ ಎಂದವರು ಹೇಳಿದ್ದಾರೆ.