ಮಕ್ಕಳಿಗೆ ಹುಟ್ಟಿದ ಹಬ್ಬ ಅಂದರೆ ಸಂಭ್ರಮವೇ ಸರಿ. ಕೇಕ್ ಕಟ್ ಮಾಡೋದು, ಸ್ನೇಹಿತರ ಜೊತೆ ಸೇರಿ ಮಜಾ ಮಾಡೋದು…..ಹೀಗೆ ಮಕ್ಕಳು ಜನ್ಮದಿನವನ್ನ ತುಂಬಾನೇ ಎಂಜಾಯ್ ಮಾಡ್ತಾರೆ. ಆದರೆ ಮಹಾರಾಷ್ಟ್ರದ 6 ವರ್ಷದ ಬಾಲಕಿ ಮಾತ್ರ ತನ್ನ ಜನ್ಮದಿನಾಚರಣೆಯನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾಳೆ.
ಗಂದ್ರೆ ಎಂಬ ಗ್ರಾಮದ ನಿವಾಸಿಯಾಗಿರುವ ಯುಗಾ ಅಮೋಲ್ ಠಾಕ್ರೆ ಎಂಬಾಕೆ ತನ್ನ ಜನ್ಮದಿನದಂದು ಕೇಕ್ ಕತ್ತರಿಸೋದ್ರ ಬದಲಾಗಿ ಕುಟುಂಬಸ್ಥರಿಗೆ ರಕ್ತದಾನ ಮಾಡುವಂತೆ ಪ್ರೇರಪಣೆ ನೀಡಿದ್ದಾಳೆ.
ರಕ್ತದಾನ ಮಾಡುವಂತೆ ಮಾಧ್ಯಮಗಳಲ್ಲಿ ಮಾಡಲಾಗುತ್ತಿದ್ದ ಮನವಿಗಳನ್ನ ನೋಡಿದ್ದ ಯುಗಾ, ಕುಟುಂಬಸ್ಥರ ಬಳಿ ನನಗೆ ಯಾವುದೇ ಕೇಕ್ ಹಾಗೂ ಉಡುಗೊರೆಗಳು ಬೇಡ. ಬದಲಾಗಿ ನನಗಾಗಿ ರಕ್ತದಾನ ಮಾಡಿ ಎಂದು ಮನವಿ ಮಾಡಿದ್ದಾಳೆ.
ಈ ಪುಟ್ಟ ಬಾಲಕಿಯ ಮನವಿಗೆ ಸ್ಪಂದಿಸಿದ ಆಕೆಯ ಕುಟುಂಬಸ್ಥರು ಹಾಗೂ ಕುಟುಂಬದ ಆಪ್ತರು ಸೇರಿದಂತೆ ಒಟ್ಟು 36 ಮಂದಿ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಬಾಲಕಿಯ ಈ ನಿರ್ಧಾರ ಮೆಚ್ಚುವಂತದ್ದೇ ಎಂದು ಡಾ. ವೈಭವ್ ಠಾಕ್ರೆ ಹೇಳಿದ್ದಾರೆ.