ಮೈಸೂರು: ಹಾಲು ಉತ್ಪಾದಕರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಹಾಲು ಖರೀದಿ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಲು ಖರೀದಿ ದರವನ್ನು ಹೆಚ್ಚಿಸಿದೆ. ಕೊರೋನಾದಿಂದ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗುವ ಉದ್ದೇಶದಿಂದ ಖರೀದಿ ದರ ಹೆಚ್ಚಳ ಮಾಡಲಾಗಿದ್ದು, ಪ್ರತಿ ಲೀಟರಿಗೆ ಖರೀದಿ ದರ 24 ರೂ.ನಿಂದ 26 ರೂಪಾಯಿಗೆ ಏರಿಕೆಯಾಗಲಿದೆ. ಏಪ್ರಿಲ್ 1 ರಿಂದ ನೂತನ ದರ ಜಾರಿಗೆ ಬರಲಿದ್ದು, ಸರ್ಕಾರ ನೀಡುವ ಪ್ರೋತ್ಸಾಹ ಧನ ಸೇರಿ ಪ್ರತಿ ಲೀಟರ್ ಹಾಲಿಗೆ 31 ರೂಪಾಯಿ ಉತ್ಪಾದಕರಿಗೆ ಸಿಗಲಿದೆ. ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯಾಪ್ತಿಯ ರೈತರಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.