ಕಾಸರಗೋಡು: ಬಿಎಸ್ಎನ್ಎಲ್ ಕಚೇರಿಯಲ್ಲಿ ರಾತ್ರಿ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ರಂಜಿತ್ ರಾಮಚಂದ್ರನ್ ಈಗ ರಾಂಚಿಯ IIM ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿದ್ದಾರೆ.
ಸದ್ಯ ಅವರು ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರವೇ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಅಂದಹಾಗೇ, ಪದವಿವರೆಗೂ ಮಾತೃಭಾಷೆ ಮಲಯಾಳಂನಲ್ಲಿ ಓದಿದ ರಂಜಿತ್ ರಾಮಚಂದ್ರನ್ ಉನ್ನತ ಶಿಕ್ಷಣ, ಪಿ.ಹೆಚ್.ಡಿ. ಪಡೆಯಲು ಭಾಷೆ ಅಡ್ಡಿಯಾಗಿಲ್ಲ. ರಾತ್ರಿ ಬಿಎಸ್ಎನ್ಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಕಷ್ಟದ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಸ್ಟ್ ವೈರಲ್ ಆಗಿದೆ.
ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ. ಅವರ ತಂದೆ ಟೈಲರ್ ಆಗಿದ್ದು, ತಾಯಿ ಉದ್ಯೋಗಖಾತ್ರಿ ಯೋಜನೆಯಡಿ ದೈನಂದಿನ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಮೂವರು ಮಕ್ಕಳಲ್ಲಿ ರಂಜಿತ್ ಹಿರಿಯವರು. ಮಳೆಗಾಲದಲ್ಲಿ ಸೋರುವ ಶಿಥಿಲಗೊಂಡ ಮನೆಯಲ್ಲಿ ಇವರ ಜೀವನ ನಡೆಯುತ್ತದೆ.