ರಾಜಧಾನಿ ಬೆಂಗಳೂರು ಕೊರೋನಾ ಹಾಟ್ ಸ್ಪಾಟ್ ಆಗಿದ್ದು, ರಾಜ್ಯದಲ್ಲಿ ದಾಖಲಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ದಿನೇ ದಿನೇ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಸಕ್ರಿಯ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ.
ಪ್ರಧಾನಿ ಮೋದಿ ಅವರು ಸಿಎಂಗೆ ಕರೆ ಮಾಡಿ ಸೋಂಕು ತಡೆಗೆ ಕಠಿಣ ನಿಯಮ ಜಾರಿಗೆ ಸೂಚನೆ ನೀಡಿದ್ದಾರೆ. ಸೋಂಕು ತಡೆಯುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಕೂಡ ಕಠಿಣ ನಿಯಮ ಜಾರಿಗೊಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರ್ಬಂಧ ಹೇರಬೇಕು ಎಂದು ಅಭಿಪ್ರಾಯ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಕಠಿಣ ನಿರ್ಬಂಧ ಜಾರಿಗೊಳಿಸಿರುವ ಸರ್ಕಾರ ನೈಟ್ ಕರ್ಫ್ಯೂ ಕೂಡ ಜಾರಿ ಮಾಡಿದೆ. 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಮುಂದುವರೆದ ಭಾಗವಾಗಿ ಬೆಂಗಳೂರು ಸೇರಿ ಕೊರೋನಾ ಸೋಂಕು ಹೆಚ್ಚಾಗಿರುವ ಕಡೆ ಲಾಕ್ ಡೌನ್ ಕೂಡ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.