ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರೈತರ ಮೇಲೆ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿತ್ತು ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ರೈತರ ಮೇಲೆ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿದ್ದು, ರೈತರ ಬಗ್ಗೆ ಮೃದು ಮಾತನಾಡುತ್ತಲೇ ಬೆನ್ನಿಗೆ ಚೂರಿ ಹಾಕುತ್ತಿದೆ. ಈಗ ರಸಗೊಬ್ಬರ ದರವನ್ನು ಶೇಕಡ 60 ರಷ್ಟು ಹೆಚ್ಚಳ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸಗೊಬ್ಬರ ಕಂಪನಿ ಪ್ರತಿನಿಧಿಗಳ ಜೊತೆ ಕೇಂದ್ರ ಸಚಿವ ಸದಾನಂದಗೌಡರು ಸಭೆ ನಡೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಧಾನಿಯವರೊಂದಿಗೆ ಮಾತನಾಡಿ ಅವರಿಗೆ ಮನವರಿಕೆ ಮಾಡಿಕೊಳ್ಳಬೇಕು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಬಾರದು. ಸದಾನಂದಗೌಡರು ಪ್ರಧಾನಿಯವರೊಂದಿಗೆ ಮಾತನಾಡಿ ರಸಗೊಬ್ಬರಕ್ಕೆ ನೀಡುತ್ತಿದ್ದ 1.5 ಲಕ್ಷ ಕೋಟಿ ರೂ. ಸಬ್ಸಿಡಿ ಮುಂದುವರೆಸುವಂತೆ ಮನವರಿಕೆ ಮಾಡಿಕೊಡಬೇಕು. ಈಗ ಅದನ್ನು ಶೇಕಡ 50 ರಷ್ಟು ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಾಯಿಮಾತಿನಿಂದ ರೈತರ ಬಾಳು ಬೆಳಗುವುದು ಸಾಧ್ಯವಿಲ್ಲ. ರೈತರ ಮತಗಳ ಮೇಲೆ ಕಣ್ಣಿಟ್ಟು ಎಷ್ಟು ದಿನ ಸುಳ್ಳಿನ ಅರಮನೆ ಕಟ್ಟುತ್ತೀರಿ? ಇನ್ನಾದರೂ ರೈತರಿಗೆ ಸಹನೀಯ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ. ರಸಗೊಬ್ಬರದ ಮೇಲಿನ ದರ ಹೆಚ್ಚಳ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.