ಬೆಂಗಳೂರು: ರಾಜಧಾನಿ ಬೆಂಗಳೂರಿಗರಿಗೆ ಬಿಗ್ ಶಾಕ್ ಕಾದಿದ್ದು, ಕೊರೊನಾ ಕರ್ಫ್ಯೂ ಬಳಿಕ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಾಗಲಿದೆಯಾ ಎಂಬ ಅನುಮಾನ ಶುರುವಾಗಿದೆ.
ರಾಜ್ಯದಲ್ಲಿ ಮಿತಿ ಮೀರುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತುರ್ತು ಸಭೆ ನಡೆದಿದ್ದು, ಸಭೆಯಲ್ಲಿ ಕೊರೊನಾ ಚೈನ್ ಲಿಂಕ್ ಕಟ್ ಮಾಡಬೇಕಾದರೆ ಬೆಂಗಳೂರಿನಲ್ಲಿ ಲಾಕ್ ಡೌನ್ ಅನಿವಾರ್ಯವಾಗಲಿದೆ ಎಂದು ಸದಸ್ಯರು ಸಲಹೆ ನೀಡಿದ್ದಾರೆ.
ಹಾಗಾಗಿ ರಾಜಧಾನಿಯಲ್ಲಿ ಲಾಕ್ ಡೌನ್ ಜಾರಿ ಬಗ್ಗೆ ಚರ್ಚೆ ನಡೆದಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ ಕರ್ಫ್ಯೂ ಬಳಿಕ ಬೆಂಗಳೂರಿನಲ್ಲಿ 10 ದಿನ ಕಂಪ್ಲೀಟ್ ಲಾಕ್ ಡೌನ್ ಜಾರಿಗೊಳಿಸುವುದು ಉತ್ತಮ ಎಂದು ಸರ್ಕಾರಕ್ಕೆ ಸಲಹಾ ಸಮಿತಿ ಸಲಹೆ ನೀಡಿದೆ ಎನ್ನಲಾಗಿದೆ.
ಆದರೆ ಸಚಿವ ಸುಧಾಕರ್ ಲಾಕ್ ಡೌನ್ ಬದಲಾಗಿ ಪರ್ಯಾಯ ಸಲಹೆ ನೀಡುವಂತೆ ಕೇಳಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿರುವ ಸದಸ್ಯರು ಮೈಕ್ರೋ ಕಂಟೇನ್ಮೆಂಟ್ ಝೋನ್ ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಸೋಂಕು ಕಂಡು ಬಂದ ಏರಿಯಾ ಸಂಪೂರ್ಣ ನಿರ್ಬಂಧಿತ ಪ್ರದೇಶ ಘೋಷಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ನೈಟ್ ಕರ್ಫ್ಯೂ ಬಳಿಕವೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿದ್ದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಾಗುತ್ತಾ ಅಥವಾ ಇನ್ನಷ್ಟು ಕಠಿಣ ನಿಯಮ ಜಾರಿಗೆ ಬರಲಿದೆಯೇ ಕಾದುನೋಡಬೇಕಿದೆ.