ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇವಾಲಯಗಳ ತವರೂರು ಎಂದು ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲಿ ದೇಶದ ನಾನಾ ಭಾಗದ ಭಕ್ತರ ಸಕಲ ಸಂಕಷ್ಟಗಳನ್ನು ನಿವಾರಿಸಿದ ಅದೆಷ್ಟೋ ದೈವ-ದೇವಾಲಯಗಳಿವೆ. ನಂಬಿದ ಭಕ್ತರನ್ನು ಎಂದೂ ಕೈ ಬಿಡದ ಅವರ ಸಕಲ ಅಭೀಷ್ಠೆಗಳನ್ನು ನೆರವೇರಿಸುವ ಮಹಿಮಾನ್ವಿತ ಶಕ್ತಿ ಕೇಂದ್ರಗಳು ತುಳುನಾಡಿನಲ್ಲಿವೆ. ಅಂತಹ ಕ್ಷೇತ್ರಗಳ ಪೈಕಿ ಅಗ್ರಸ್ಥಾನದಲ್ಲಿರುವುದು ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಭೇಶ್ವರ ದೇವಸ್ಥಾನ. ಮಹಾಗಣಪತಿಯ ದಿವ್ಯ ಸಾನಿಧ್ಯವನ್ನು ಹೊಂದಿರುವ ಈ ದೇವಾಲಯ ನಾಡಿನ ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿ ನೆಲೆ ನಿಂತಿರುವ ಶ್ರೀ ಶರಭೇಶ್ವರ ಮತ್ತು ಶರವು ಮಹಾಗಣಪತಿ ನಂಬಿದ ಭಕ್ತರ ಸಕಲ ಕಷ್ಟ ನಿವಾರಿಸುತ್ತಿದ್ದಾರೆ. ಮಂಗಳೂರು ನಗರ ಪ್ರದೇಶದಲ್ಲಿಯೇ ಅಂದರೆ ಕೆಎಸ್ರಾವ್ ರಸ್ತೆ ಸಮೀಪದಲ್ಲೇ ಇರುವ ಈ ಕ್ಷೇತ್ರದಲ್ಲಿ ಲಿಂಗರೂಪಿಯಾಗಿ ಶ್ರೀ ಶರಭೇಶ್ವರ ನೆಲೆ ನಿಂತಿದ್ದರೆ. ಇಲ್ಲಿನ ತೆಂಕು ಗೋಡೆಯಲ್ಲಿ ಶ್ರೀ ಶರವು ಮಹಾಗಣಪತಿ ನೆಲೆಯೂರಿದ್ದಾನೆ. ನಗರದ ಹೃದಯ ಭಾಗದಲ್ಲಿಯೇ ಶ್ರೀ ಶರವು ಮಹಾಗಣಪತಿ ನೆಲೆಯೂರಿರುವುದು ಈ ಕ್ಷೇತ್ರದ ವಿಶೇಷ.
ಶರವು ಕ್ಷೇತ್ರದಲ್ಲಿ ಶಿವಾಲಯದ ಗರ್ಭಗುಡಿ, ಸುತ್ತು ಪೌಳಿಗಳು ಬಂಗಾರಾಜನಿಂದ ನಿರ್ಮಿತವಾದ ಮಹಾಗಣಪತಿಯ ಗರ್ಭಗುಡಿ, ಗೋಪುರ, ಮುಖಮಂಟಪ, ಮಹಾಯಾಗದ ಎರಡು ಯಜ್ಞ ಕುಂಡಗಳನ್ನು ಕಾಣಬಹುದು. ಹೊರ ಅಂಗಣದಲ್ಲಿ ರಕ್ತೇಶ್ವರಿ ಗುಡಿ, ವಸಂತ ಮಂಟಪ, ಕೆರೆ ಇದೆ. ರಾಜಾಂಗಣದಲ್ಲಿ ದೀಪಸ್ತಂಭ. ದೇವಸ್ಥಾನದ ಹೊರ ಭಾಗದಲ್ಲಿ ಅಶ್ವಥಕಟ್ಟೆ ಕಟ್ಟೆಯಲ್ಲಿ ಅಶ್ವಥ ಮರ, ನಾಗನ ಸನ್ನಿಧಿ ನೋಡಬಹುದು. ದೇವಸ್ಥಾನದಲ್ಲಿ ವಾರ್ಷಿಕ ಉತ್ಸವಗಳು ಹಲವು ನಡೆಯುತ್ತವೆ. ಸಿಂಹ ಮಾಸದ ಚೌತಿಯು ಅವುಗಳಲ್ಲಿ ಅತ್ಯಂತ ಪ್ರಮುಖವಾದುದು.
ಒಟ್ಟಾರೆಯಾಗಿ ಶರವು ಮಹಾಗಣಪತಿ ದೇವಸ್ಥಾನ ಕರಾವಳಿಯ ಗಣಪತಿ ದೇವಸ್ಥಾನಗಳ ಪೈಕಿ ಅಗ್ರಸ್ಥಾನದಲ್ಲಿದ್ದು ಅಸಂಖ್ಯಾತ ಭಕ್ತರನ್ನು ಸೆಳೆಯುತ್ತಿದೆ. ದೇವಾಲಯಗಳ ತವರೂರು ಎಂದೇ ಕರೆಸಿಕೊಂಡಿರುವ ಕರಾವಳಿಯಲ್ಲಿ ಶರವು ಮಹಾಗಣಪತಿ ದೇವಸ್ಥಾನ ಮುಕುಟಗಿರಿಯಂತೆ ಕಂಗೊಳಿಸುತ್ತಿದೆ. ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ, ವರ್ಷಂಪ್ರತೀ ನಡೆಯುವ ಜಾತ್ರೆಗೆ ದೂರ ದೂರದ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡಿ ಪುನೀತರಾಗುತ್ತಿದ್ದಾರೆ.