ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಣ್ಣೂರು ಜಿಲ್ಲೆಯ ಕುತ್ತಪರಂಬದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿರುವ ಕೆ. ಸ್ವಪ್ನಾ(38) ಆತ್ಮಹತ್ಯೆ ಮಾಡಿಕೊಂಡವರು. ಅವರು ಶುಕ್ರವಾರ ಬೆಳಗ್ಗೆ ತಮ್ಮ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸಕ್ಕೆ ಬಂದ ಮಹಿಳಾ ಉದ್ಯೋಗಿಯೊಬ್ಬರು ಮ್ಯಾನೇಜರ್ ಸಪ್ನಾ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡಿದ್ದು, ಉಳಿದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರೊಂದಿಗೆ ಬ್ಯಾಂಕಿನ ಸಿಬ್ಬಂದಿ ಸ್ವಪ್ನಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಉಳಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುತ್ತಪರಂಬ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಎಸಿಪಿ ಕೆ.ಜಿ. ಸುರೇಶ್ ಮತ್ತು ಎಸ್ಐ ಕೆ.ಟಿ. ಸಂದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ವಪ್ನಾ ಅವರ ಡೈರಿಯನ್ನು ವಶಪಡಿಸಿಕೊಳ್ಳಲಾಗಿದ್ದು ಕೆಲಸದ ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೇ ಇಂತಹ ನಿರ್ಧಾರ ಕೈಗೊಂಡಿರುವ ಬಗ್ಗೆ ಗೊತ್ತಾಗಿದೆ.
ತ್ರಿಶೂರ್ ಜಿಲ್ಲೆ ಮನ್ನುತಿ ಮೂಲದ ಸ್ವಪ್ನಾ ಅವರು 2020 ರ ಸೆಪ್ಟಂಬರ್ ತೊಕ್ಕಿಲಂಗಡಿ ಶಾಖೆಯಿಂದ ಕುತ್ತಪಂರಂಬಕ್ಕೆ ವರ್ಗಾವಣೆಗೊಂಡಿದ್ದರು. ಕಣ್ಣೂರಿನ ನಿರ್ಮಲಗಿರಿಯಲ್ಲಿ ಇಬ್ಬರು ಮಕ್ಕಳು ಸೇರಿ ಕುಟುಂಬದವರೊಂದಿಗೆ ವಾಸಿಸುತ್ತಿದ್ದರು.