ಗರ್ಭಧಾರಣೆಗೆ ಯತ್ನಿಸುತ್ತಿದ್ದ ಬ್ರಿಟನ್ನ ರೆಬೆಕ್ಕಾ ರಾಬರ್ಟ್ ಹಾಗೂ ಅವಳ ಪತಿ ಕೊನೆಗೂ ಗರ್ಭಧಾರಣೆ ಟೆಸ್ಟ್ನಲ್ಲಿ ಪಾಸಿಟಿವ್ ರಿಸಲ್ಟ್ ಪಡೆದ ಬಳಿಕ ಫುಲ್ ಖುಷ್ ಆಗಿದ್ದರು.
ಆದರೆ ಇಷ್ಟಕ್ಕೇ ಕತೆ ಮುಗಿಯಲಿಲ್ಲ. ಕೆಲವೇ ದಿನಗಳಲ್ಲಿ ಈ ಖುಷಿ ಆಘಾತವಾಗಿ ಬದಲಾಯ್ತು. ಈ ಹಿಂದೆ ಒಂದೇ ಮಗುವನ್ನ ಗರ್ಭದಲ್ಲಿ ಹೊಂದಿದ್ದ ರೆಬೆಕ್ಕಾ 12ನೇ ವಾರ ಸ್ಕ್ಯಾನಿಂಗ್ ಮಾಡಿಸುವ ವೇಳೆ ಆಕೆಯ ಗರ್ಭದಲ್ಲಿ ಎರಡು ಮಗು ಇದೆ ಅನ್ನೋದು ತಿಳಿದುಬಂದಿದೆ. ಈ ಎರಡನೇ ಮಗು ಒಂದನೇ ಮಗುವಿಗಿಂತ ಕಡಿಮೆ ಬೆಳವಣಿಗೆಯನ್ನ ಹೊಂದಿತ್ತು.
ದಂಪತಿಯನ್ನ ಆಶ್ಚರ್ಯದಿಂದ ನೋಡಿದ ಸೋನೋಗ್ರಾಫರ್, ನೀವು ಅವಳಿ ಮಕ್ಕಳ ಪೋಷಕರಾಗುತ್ತಿದ್ದೀರಾ ಅನ್ನೋದು ನಿಮಗೆ ತಿಳಿದಿತ್ತೇ ಎಂದು ಕೇಳಿದ್ದಾರೆ. ಬಳಿಕ ಇದೊಂದು ವೈದ್ಯಕೀಯ ಲೋಕದ ಅಚ್ಚರಿಯ ಘಟನೆ ಅನ್ನೋದು ತಿಳಿದುಬಂದಿದೆ. ರೆಬೆಕ್ಕಾ ಹೊಟ್ಟೆಯಲ್ಲಿ ಒಂದು ಮಗುವಿರುವಾಗಲೇ ಮತ್ತೊಂದು ಬಾರಿಗೆ ಗರ್ಭವತಿಯಾಗಿದ್ದರು. ಎರಡು ಮಗುವಿನ ನಡುವೆ ಮೂರು ವಾರಗಳ ಅಂತರವಿತ್ತು.
ಈಗಾಗಲೇ 15 ವರ್ಷದ ಮಗಳನ್ನ ಹೊಂದಿದ್ದ ಈ ದಂಪತಿಗೆ ಈ ವಿಚಿತ್ರ ಗರ್ಭಧಾರಣೆ ವಿಚಾರವನ್ನ ಅರಗಿಸಿಕೊಳ್ಳೋದೇ ಕಷ್ಟವಾಗಿತ್ತು. ಒಂದು ಮಗುವಿಗಿಂತ ಇನ್ನೊಂದು ಮಗು ಚಿಕ್ಕದಾಗಿದ್ದರಿಂದ ಈ ಗರ್ಭಧಾರಣೆ ಅವಧಿ ರೆಬೆಕ್ಕಾ ಪಾಲಿಗೆ ಸವಾಲಿನದ್ದೇ ಆಗಿತ್ತು.
ಎಲ್ಲಾ ಅವಳಿ ಮಕ್ಕಳ ಗರ್ಭಧಾರಣೆಯ ರೀತಿ ಇದಾಗಿರಲಿಲ್ಲ. ರೆಬೆಕ್ಕಾರ ವೈದ್ಯರಾಗಿದ್ದ ವಾಕರ್ ಎರಡನೇ ಮಗು ಬದುಕುಳಿಯಬಹುದು ಎಂಬ ಭರವಸೆಯನ್ನ ನೀಡಿರಲಿಲ್ಲ. ಎರಡೂ ಮಕ್ಕಳ ಹೆರಿಗೆಯ ದಿನಾಂಕ ವಿಭಿನ್ನವಾಗಿತ್ತು. ಆದರೆ ಸಿ ಸೆಕ್ಷನ್ ಮೂಲಕ ರೆಬೆಕ್ಕಾ ಸೆಪ್ಟೆಂಬರ್ 17ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.
ಮೊದಲನೆ ಗಂಡು ಮಗು 4 ಪೌಂಡ್ ತೂಕ ಹೊಂದಿದ್ದರೆ ಎರಡನೇ ಹೆಣ್ಣುಮಗು ಕೇವಲ 2 ಪೌಂಡ್ ತೂಕ ಹೊಂದಿತ್ತು. ಗಂಡು ಮಗುವನ್ನ ಮೂರು ವಾರಗಳ ಕಾಲ ಹಾಗೂ ಹೆಣ್ಣುಮಗುವನ್ನ 95 ದಿನಗಳ ಕಾಲ ಐಸಿಯುವಿನಲ್ಲೇ ಇಡಲಾಗಿತ್ತು.
ಇದೀಗ ಮಕ್ಕಳ ಆರೋಗ್ಯ ಸಂಪೂರ್ಣ ಚೇತರಿಕೆಯಾಗಿದೆ. 6 ತಿಂಗಳ ಪ್ರಾಯದ ಈ ಮಕ್ಕಳು ನಮ್ಮ ಮನೆಗೆ ಸಂತಸ ತಂದಿದ್ದಾರೆ ಅಂತಾ ರೆಬೆಕ್ಕಾ ದಂಪತಿ ಹರ್ಷ ವ್ಯಕ್ತಪಡಿಸಿದ್ರು.