ಮೀರತ್: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸೋದರ ಸಂಬಂಧಿಯನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯ ಕಂಕರ್ ಖೇರಾ ಪ್ರದೇಶದಲ್ಲಿ ನಡೆದಿದೆ.
ರೈಲ್ವೆ ಕಾಲೋನಿಯಲ್ಲಿ ಮನೆಯೊಂದರ ಮೇಲೆ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ಹಲವು ಗಂಟೆಗಳ ನಂತರ ಮೃತವ್ಯಕ್ತಿಯ ಸೋದರ ಸಂಬಂಧಿಯನ್ನು ಬಂಧಿಸುವ ಮೂಲಕ ಕೊಲೆ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಆಶು ಬಂಧಿತ ಆರೋಪಿ. ಈತನ ಫೋನ್ ಕಾಲ್ ಡೀಟೇಲ್ಸ್ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆಶು ಪತ್ನಿಯೊಂದಿಗೆ ಆತನ ಸೋದರ ಸಂಬಂಧಿಯಾಗಿರುವ ಭೀಮ ಲೋಧಿ ಅಕ್ರಮ ಸಂಬಂಧ ಹೊಂದಿದ್ದ.
ಜವಾಹರಪುರಿ ಏರಿಯಾ ನಿವಾಸಿಯಾಗಿರುವ ಭೀಮ ಲೋಧಿ ಬಿಯರ್ ಡಿಸ್ಟಿಲರಿಯಲ್ಲಿ ಕೆಲಸ ಮಾಡುತ್ತಿದ್ದ. ಏಪ್ರಿಲ್ 5 ರಂದು ಸಂಜೆಯಿಂದ ನಾಪತ್ತೆಯಾಗಿದ್ದು, ಕುಟುಂಬದವರು ಕಂಕರ್ ಖೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕ್ಯಾಂಟ್ ರೈಲ್ವೆ ನಿಲ್ದಾಣದ ಬಳಿಯ ರೈಲ್ವೇ ಕಾಲೋನಿಯ ಮನೆಯ ಮೇಲ್ಛಾವಣಿಯಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು ಗಂಟಲು ಸೀಳಿ ಕೊಲೆ ಮಾಡಲಾಗಿತ್ತು.
ಇನ್ಸ್ ಪೆಕ್ಟರ್ ತಪೇಶ್ವರ್ ಸಾಗರ್ ನೀಡಿರುವ ಮಾಹಿತಿಯಂತೆ ಆಶು ಪತ್ನಿ ಜೊತೆಗೆ ಲೋಧಿ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಚಾರ ತಿಳಿದ ಅಶು ಪತ್ನಿಯೊಂದಿಗೆ ಜಗಳವಾಡಿ ಲೋಧಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದಾನೆ. ಅಶು ಮತ್ತು ಲೋಧಿ ಇಬ್ಬರು ಡ್ರಗ್ಸ್ ಸೇವಿಸುತ್ತಿದ್ದರು. ಡ್ರಗ್ಸ್ ತೆಗೆದುಕೊಳ್ಳುವ ನೆಪದಲ್ಲಿ ಲೋಧಿಯನ್ನು ಕರೆದುಕೊಂಡು ಹೋದ ಅಶು ಹರಿತವಾದ ಆಯುಧದಿಂದ ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ. ಇದಕ್ಕೂ ಮುನ್ನ ಇಬ್ಬರ ನಡುವೆ ಜಗಳ ನಡೆದಿದ್ದು, ಮೃತನ ಕೈಯಲ್ಲಿ ಕೂದಲು ಕೂಡ ಇದ್ದವು ಎಂದು ಹೇಳಿದ್ದಾರೆ.