ಬೆಂಗಳೂರು: ನಿವೃತ್ತ ಚಾಲಕರು ಮತ್ತು ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಸೂಚನೆ ಹೊರಡಿಸಿದೆ.
ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಹೀಗಾಗಿ ನಿವೃತ್ತ ಚಾಲಕರು, ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲಾಗುವುದು.
ಷರತ್ತುಗಳನ್ನು ಒಪ್ಪಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ ನಿವೃತ್ತ ಚಾಲನಾ ಸಿಬ್ಬಂದಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ದೈಹಿಕವಾಗಿ ಚಾಲನೆ ಮತ್ತು ನಿರ್ವಾಹಕರು ವೃತ್ತಿ ಮಾಡಲು ಸಮರ್ಥರಿರುವ ಬಗ್ಗೆ ನಿಗಮದಲ್ಲಿ ನಿಗದಿಪಡಿಸಿದ ದೈಹಿಕ, ದೃಷ್ಟಿ ಸಾಮರ್ಥ್ಯ ಪ್ರಮಾಣಪತ್ರ, ಕೋವಿಡ್-19 ನೆಗೆಟಿವ್ ವರದಿ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು.
ಪ್ರಸ್ತುತ ಚಾಲ್ತಿಯಲ್ಲಿರುವ ಭಾರಿ ವಾಹನ, ನಿರ್ವಾಹಕರ ಪರವಾನಿಗೆ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಪ್ರತಿದಿನದ ಕರ್ತವ್ಯಕ್ಕೆ ಚಾಲಕರಿಗೆ 800 ರೂಪಾಯಿ ಮತ್ತು ನಿರ್ವಾಹಕರಿಗೆ 700 ರೂಪಾಯಿ ಗೌರವಧನ ಪಾವತಿಸಲಾಗುವುದು. ವಾರದ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ. ಒಪ್ಪಂದದ ಅವಧಿಯನ್ನು ಯಾವುದೇ ಹೆಚ್ಚುವರಿ ಆರ್ಥಿಕ ಸೇವಾ ಸೌಲಭ್ಯಗಳಿಗೆ ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.