ಐಪಿಎಲ್ ನ ಸೂಪರ್ ಸ್ಟಾರ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ. ಕಳೆದ 13 ಋತುಗಳಲ್ಲಿಯೂ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಟವಾಡಿದ್ದಾರೆ. ಈ ಬಾರಿಯೂ ಕೊಹ್ಲಿ ಆರ್ಸಿಬಿ ಜರ್ಸಿಯಲ್ಲಿ ಆಡಲಿದ್ದಾರೆ. ಐಪಿಎಲ್ ನಲ್ಲಿ ಕೊಹ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಋತುವಿನಲ್ಲಿ ಕೊಹ್ಲಿ ಮತ್ತಷ್ಟು ದಾಖಲೆ ಬರೆಯುವ ನಿರೀಕ್ಷೆಯಿದೆ.
ಒಂದೇ ಋತುವಿನಲ್ಲಿ 900 ರನ್ ಗಳಿಸಿ, ಕೊಹ್ಲಿ ದಾಖಲೆ ಬರೆದಿದ್ದಾರೆ. 2016ರಲ್ಲಿ ಕೊಹ್ಲಿ 973 ರನ್ ಗಳಿಸಿದ್ದರು. ಐಪಿಎಲ್ ನಲ್ಲಿ 6 ಸಾವಿರ ರನ್ ಗೆ ಕೊಹ್ಲಿ ಹತ್ತಿರದಲ್ಲಿದ್ದಾರೆ. ಕೇವಲ 122 ರನ್ ದೂರದಲ್ಲಿದ್ದಾರೆ. ಈ ಋತುವಿನಲ್ಲಿ 122 ರನ್ ಗಳಿಸಿದ್ರೆ ಐಪಿಎಲ್ ನಲ್ಲಿ 6 ಸಾವಿರ ರನ್ ಗಳಿಸಿದ ಆಟಗಾರನ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 192 ಪಂದ್ಯಗಳಲ್ಲಿ 5878 ರನ್ ಗಳಿಸಿದ್ದಾರೆ. ಇದ್ರಲ್ಲಿ ಐದು ಶತಕ ಹಾಗೂ 39 ಅರ್ಧ ಶತಕ ಸೇರಿದೆ. ಕೊಹ್ಲಿ ಈ ಋತುವಿನಲ್ಲಿ 8 ಪಂದ್ಯಗಳನ್ನು ಆಡ್ತಿದ್ದಂತೆ ಐಪಿಎಲ್ ನಲ್ಲಿ 200 ಪಂದ್ಯ ಆಡಿದ ಆಟಗಾರನಾಗಲಿದ್ದಾರೆ. ಒಂದೇ ಫ್ರಾಂಚೈಸಿಯಿಂದ 200 ಪಂದ್ಯ ಆಡಿದ ಮೊದಲ ಆಟಗಾರರಾಗಲಿದ್ದಾರೆ ಕೊಹ್ಲಿ. ಧೋನಿ ಹಾಗೂ ರೋಹಿತ್ ಶರ್ಮಾ 200 ಪಂದ್ಯಗಳನ್ನು ಆಡಿದ್ದಾರೆ. ಆದ್ರೆ ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಆಟವಾಡಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಹೆಸರಿದೆ. ಗೇಲ್ ಐಪಿಎಲ್ ನಲ್ಲಿ 6 ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 5 ಶತಕ ಸಿಡಿಸಿದ್ದು, ಈ ಬಾರಿ ಗೇಲ್ ದಾಖಲೆ ಮುರಿಯುವ ಅವಕಾಶ ಕೊಹ್ಲಿಗಿದೆ.