ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ‘ಆತ್ಮ ನಿರ್ಭರ ಭಾರತ’ ಯೋಜನೆಯಡಿ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಕೇಂದ್ರ ಸರ್ಕಾರ ಎಸಿ, ಎಲ್ಇಡಿ ಲೈಟ್ ಗಳ ಉತ್ಪಾದನೆಯ 6238 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಿಎಲ್ಐ(ಬಿಳಿ ಸರಕುಗಳ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ) ಯೋಜನೆಗೆ ಅನುದಾನ ನೀಡಲಾಗುವುದು. ಏರ್ ಕಂಡೀಷನರ್ ಮತ್ತು ಎಲ್ಇಡಿ ಲೈಟ್ಸ್ ಒಳಗೊಂಡ ಪಿಎಲ್ಐ ಯೋಜನೆಗೆ 6238 ಕೋಟಿ ರೂಪಾಯಿ ಅನುದಾನ ಕಲ್ಪಿಸಲಾಗುವುದು.
ಪಿಎಲ್ಐ ಯೋಜನೆಯ ಮುಖ್ಯ ಉದ್ದೇಶವೆಂದರೆ ಈ ವಲಯದಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಆರ್ಥಿಕತೆ ಸೃಷ್ಟಿಸುವುದು. ದಕ್ಷತೆ ಹೆಚ್ಚಿಸುವ ಜೊತೆಗೆ ಭಾರತದಲ್ಲಿ ಉತ್ಪಾದನೆಗೆ ಒತ್ತು ನೀಡಿ, ಜಾಗತಿಕವಾಗಿ ಸ್ಪರ್ಧಾತ್ಮಕತೆ ರೂಪಿಸುವುದು. ಅಲ್ಲದೇ, ಭಾರತವನ್ನು ಜಾಗತಿಕ ಪೂರೈಕೆಯ ಸರಪಳಿಗಳ ಜೊತೆ ಜೋಡಿಸುವುದು. ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವುದು, ದೊಡ್ಡ ಪ್ರಮಾಣದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿದೆ ಎಂದು ಹೇಳಲಾಗಿದೆ.
ಏರ್ ಕಂಡೀಷನರ್ ಮತ್ತು ಎಲ್ಇಡಿ ಬಲ್ಪ್ ಗಳ ತಯಾರಿಕೆಯಲ್ಲಿ ತೊಡಗುವ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತದೆ. ಇದಕ್ಕಾಗಿ ಆತ್ಮನಿರ್ಭರ ಭಾರತ ಯೋಜನೆಯಡಿ ಅನುದಾನ ಕಾಯ್ದರಿಸಲಾಗಿದೆ.