ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ವಯಸ್ಸಿನ ಮಿತಿ ವಿಧಿಸದೆ ಕೊರೊನಾ ಲಸಿಕೆಯನ್ನ ಹಾಕಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಮ್ಮ ಸರ್ಕಾರ ಮನವಿ ಮಾಡಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ರು.
ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 45 ವರ್ಷ ಮೇಲ್ಪಟ್ಟ ಎಲ್ಲಾ ಸಿಬ್ಬಂದಿಗೆ ಲಸಿಕೆಯನ್ನ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಈ ನಡುವೆ 45 ವರ್ಷದಿಂದ ಕೆಳಗಿರುವ ಸಿಬ್ಬಂದಿಗೂ ಲಸಿಕೆ ಹಾಕಲು ವಿಶೇಷ ಅನುಮತಿ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸಾವಂತ್ ಹೇಳಿದ್ರು.
ಗೋವಾ ರಾಜ್ಯದ ಬೊಕ್ಕಸಕ್ಕೆ ಬಹುಪಾಲು ಹಣ ಪ್ರವಾಸೋದ್ಯಮ ಕ್ಷೇತ್ರದಿಂದಲೇ ಬರುತ್ತದೆ. ಇದು ಮಾತ್ರವಲ್ಲದೇ ರಾಜ್ಯದ 35 ಪ್ರತಿಶತ ಜನರಿಗೆ ಪ್ರವಾಸೋದ್ಯಮ ಕ್ಷೇತ್ರವೇ ಕೆಲಸವನ್ನ ನೀಡಿದೆ. ಲಾಕ್ಡೌನ್ ಮುಗಿದು ಪ್ರವಾಸದ ನಿರ್ಬಂಧಗಳಲ್ಲಿ ಕೆಲ ಸಡಿಲಿಕೆ ನೀಡಿದ ಬಳಿಕ ಇಲ್ಲಿಯವರೆಗೆ 25 ಲಕ್ಷ ಪ್ರವಾಸಿಗರು ಗೋವಾಗೆ ಭೇಟಿ ನೀಡಿದ್ದಾರೆ.
ನಮಗೆ ಇನ್ನೂ ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ. ಒಮ್ಮೆ ಕೇಂದ್ರ ಸರ್ಕಾರ ನಮ್ಮ ಮನವಿಗೆ ಸಮ್ಮತಿ ನೀಡಿದ್ರೆ ಎಲ್ಲಾ ಪ್ರವಾಸೋದ್ಯಮ ಸಿಬ್ಬಂದಿಗೆ ಲಸಿಕೆ ನೀಡಲು ನಾವು ತಯಾರಿದ್ದೇವೆ ಎಂದು ಸಾವಂತ್ ಹೇಳಿದ್ದಾರೆ.