ತುರ್ತು ಕರೆ ಬಂದ ತಕ್ಷಣವೇ ಚೀನಾದ ಅಗ್ನಿಶಾಮಕ ಸಿಬ್ಬಂದಿ ಮಾಡುತ್ತಿರುವ ಎಲ್ಲಾ ಕೆಲಸವನ್ನ ಹಾಗೆಯೇ ಬಿಟ್ಟು ಸೇವೆಗೆ ಹಾಜರಾಗಲು ಅಣಿಯಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಪಡೆಯುತ್ತಿದೆ. 23 ವರ್ಷದ ವ್ಯಕ್ತಿ ಸ್ನಾನ ಮಾಡುತ್ತಿದ್ದ ವೇಳೆ ಅಲಾರಂ ಬಾರಿಸಿದ್ದು ಆತ ಅಲ್ಲಿಂದಲೇ ಓಡಿ ಬಂದಿದ್ದಾನೆ. ಓಡುವ ರಭಸದಲ್ಲಿ ಆತನ ಚಪ್ಪಲಿ ಕೂಡ ಕಳಚಿ ಬಿದ್ದಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಆತ ಅಗ್ನಿಶಾಮಕ ವಾಹನ ಏರುವ ವೇಳೆಯಲ್ಲಿ ವ್ಯಕ್ತಿಯ ತಲೆಯಲ್ಲಿ ಶಾಂಪೂ ಇನ್ನೂ ಹಾಗೆಯೇ ಇತ್ತು. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿ, ನನಗೆ ಸೈರನ್ ಶಬ್ದ ಕೇಳುತ್ತಿದ್ದಂತೆಯೇ ಏನು ಮಾಡೋದು ಅಂತಾ ಅರ್ಥವಾಗಲಿಲ್ಲ. ನಾನು ತಕ್ಷಣವೇ ಸ್ನಾನಗೃಹದಿಂದ ಓಡಿ ಬಂದೆ ಎಂದು ಹೇಳಿದ್ದಾರೆ. ಆದರೆ ಇದೊಂದು ಹುಸಿ ಕರೆಯಾಗಿತ್ತು. ಆದರೂ ಈ ವ್ಯಕ್ತಿಯ ಕರ್ತವ್ಯನಿಷ್ಠೆಗೆ ನೆಟ್ಟಿಗರು ತಲೆಬಾಗಿದ್ದಾರೆ.
ಅಂದಹಾಗೆ ಇದೇನು ಮೊದಲಬಾರಿಗೆ ಅಗ್ನಿಶಾಮಕ ದಳ ಸಿಬ್ಬಂದಿ ಈ ರೀತಿ ಕರ್ತವ್ಯನಿಷ್ಠೆ ಮೆರೆದಿದ್ದಲ್ಲ. ಈ ಹಿಂದೆ ಅಗ್ನಿಶಾಮಕ ದಳ ಸಿಬ್ಬಂದಿಯೊಬ್ಬ ತನ್ನ ಮಗು ಹಾಗೂ ಪತ್ನಿಯ ಜೊತೆ ಸಮಯ ಕಳೆಯುತ್ತಿದ್ದ ವೇಳೆ ಸೈರನ್ ಶಬ್ದ ಕೇಳಿದ್ದು ಆತ ಮಗುವನ್ನ ಅಲ್ಲೇ ಬಿಟ್ಟು ಸೇವೆಗೆ ಹಾಜರಾಗಲು ಸ್ಥಳದಿಂದ ಓಡಿ ಹೋಗಿದ್ದ. ಈ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತು.