ಜನಸಾಮಾನ್ಯರಿಗೆ ಆರ್ ಬಿ ಐ ಯಾವುದೇ ಖುಷಿ ಸುದ್ದಿ ನೀಡಿಲ್ಲ. ಅಗ್ಗದ ಇಎಂಐ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ಆರ್ ಬಿ ಐ ನಿರಾಸೆಗೊಳಿಸಿದೆ. ಏಪ್ರಿಲ್ 5 ರಂದು ಪ್ರಾರಂಭವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ಸಭೆ ಇಂದು ಮುಕ್ತಾಯಗೊಂಡಿದೆ. ಕೇಂದ್ರ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ, ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಕೊರೊನಾ ವೈರಸ್ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಇಂಥ ಸಂದರ್ಭದಲ್ಲಿ ಆರ್ ಬಿ ಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ದರ ಶೇಕಡಾ ನಾಲ್ಕರಷ್ಟಿದೆ. ಎಂಪಿಸಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಂಡಿದೆ. ಇದ್ರಿಂದ ಗ್ರಾಹಕರಿಗೆ ಇಎಂಐ ಅಥವಾ ಸಾಲದ ಬಡ್ಡಿದರಗಳಲ್ಲಿ ಯಾವುದೇ ರಿಯಾಯಿತಿ ಸಿಕ್ಕಿಲ್ಲ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ ಶೇಕಡಾ 4.25 ರಷ್ಟಿದೆ. ಬ್ಯಾಂಕ್ ಸಾಲದ ದರವನ್ನು ಬದಲಾಯಿಸದಿರಲು ನಿರ್ಧರಿಸಲಾಗಿದೆ.
ಆರ್‌ಬಿಐ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರ ಶೇಕಡಾ 4 ಮತ್ತು ರಿವರ್ಸ್ ರೆಪೊ ದರ ಶೇಕಡಾ 3.35 ರಷ್ಟಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಇದೇ ವೇಳೆ 2021-22ನೇ ಸಾಲಿನಲ್ಲಿ ಶೇಕಡಾ 10.5 ಜಿಡಿಪಿಯನ್ನು ಅಂದಾಜು ಮಾಡಲಾಗಿದೆ.