ಬೆಂಗಳೂರು: ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರೈತರಿಗೆ ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, 30 ಲಕ್ಷ ರೈತರಿಗೆ 20 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ನಬಾರ್ಡ್ ನಿಂದ ಕೃಷಿ ಸಾಲ ವಿತರಣೆಗೆ ಮರು ಹಣಕಾಸು ನೆರವು ಪ್ರಮಾಣವನ್ನು ಶೇಕಡ 35 ರಿಂದ ಶೇಕಡ 50 ರಷ್ಟು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಿಂದಿನ ವರ್ಷಗಳ ಮಾಸಿಕ ಬೆಳೆಸಾಲ ಬೇಡಿಕೆ ಮಾಹಿತಿ ಆಧರಿಸಿ ಯಾವ ತಿಂಗಳಿಗೆ ಎಷ್ಟು ಸಾಲ ಬೇಕಿದೆ ಎಂಬುದನ್ನು ಗಮನಿಸಿ ಸಾಲ ವಿತರಿಸಲಾಗುವುದು.
ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ನಿಂದ ಸಾಲ ಮನ್ನಾ ಕುರಿತು ಬರುವ ಕ್ಲೈಮ್ ಗಳಿಗೆ ತಕ್ಷಣವೇ ಹಣಕಾಸು ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎನ್ನಲಾಗಿದೆ.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು, ಬೆಳೆಸಾಲ ವಿತರಣೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದು, 20 ಸಾವಿರ ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ
ನವೀಕರಣ ಜೊತೆಗೆ 3 ಲಕ್ಷ ಹೊಸ ರೈತರಿಗೆ ಹೆಚ್ಚುವರಿಯಾಗಿ ಸಾಲ ನೀಡಲಾಗುವುದು. ಕಳೆದ ವರ್ಷ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ಮಾಡಲಾಗಿದ್ದು, ಈ ವರ್ಷವೂ ದುಪ್ಪಟ್ಟು ಬೆಳೆ ಸಾಲ ನೀಡಲಾಗುವುದು. ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಬೆಳೆ ಸಾಲ, ಶೇಕಡ 3 ರಷ್ಟು ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡಲಾಗುವುದು ಎನ್ನಲಾಗಿದೆ.