ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಆ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕೆಲಸ ಮಾಡಿರಲಿಲ್ಲ. ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ ವ್ಯವಹಾರಗಳು ವಿಫಲವಾಗಿದ್ದವು. ಕೆಲ ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಹಣ ಸಿಕ್ಕಿಲ್ಲ. ಯುಪಿಐ ವಹಿವಾಟು ವಿಫಲವಾಗಿದ್ದು, ಬ್ಯಾಂಕ್ ಖಾತೆಗೆ ಹಣ ಹಿಂತಿರುಗಿಸಿಲ್ಲವಾದ್ರೆ ಚಿಂತೆ ಮಾಡುವ ಅಗತ್ಯವಿಲ್ಲ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಕಾರ, ಏಪ್ರಿಲ್ 1 ರ ಸಂಜೆ ವೇಳೆಗೆ ಹೆಚ್ಚಿನ ಬ್ಯಾಂಕುಗಳು ಸಹಜ ಸ್ಥಿತಿಗೆ ಮರಳಿವೆ. ಗ್ರಾಹಕರು ತಡೆರಹಿತ ಐಎಂಪಿಎಸ್ ಮತ್ತು ಯುಪಿಐ ಸೇವೆಗಳನ್ನು ಪಡೆದಿದ್ದಾರೆ. ಆದರೆ ಕೆಲವರ ವಹಿವಾಟು ವಿಫಲವಾಗಿದೆ. ನೀವು ಇವರಲ್ಲಿ ಒಬ್ಬರಾಗಿದ್ದು,ನಿಗದಿತ ಸಮಯಕ್ಕೆ ಹಣ ವಾಪಸ್ ಬಂದಿಲ್ಲವೆಂದ್ರೆ ಆರ್ಬಿಐ ನಿಯಮದಂತೆ ನಡೆದುಕೊಳ್ಳಬೇಕು.
ಅಕ್ಟೋಬರ್ 2019 ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿ ಪ್ರಕಾರ, ಹಣವನ್ನು ಸ್ವಯಂಚಾಲಿತವಾಗಿ ಹಿಂತಿರುಗಿಸಲು ಬ್ಯಾಂಕ್ ಗಳಿಗೆ ಗಡುವು ನಿಗದಿಪಡಿಸಲಾಗಿದೆ. ಒಂದು ವೇಳೆ ನಿಗದಿತ ಸಮಯಕ್ಕೆ ಹಣ ವಾಪಸ್ ಬರದೆ ಹೋದಲ್ಲಿ ಬ್ಯಾಂಕ್, ಗ್ರಾಹಕರಿಗೆ ಪರಿಹಾರ ನೀಡಬೇಕು. ಸುತ್ತೋಲೆಯ ಪ್ರಕಾರ, ಗಡುವು ಮುಗಿದ ನಂತರ ದಿನಕ್ಕೆ 100 ರೂಪಾಯಿ ಪರಿಹಾರ ನೀಡಬೇಕಾಗುತ್ತದೆ.
ಹಣ ಕಡಿತವಾಗಿ 24 ಗಂಟೆಯೊಳಗೆ ಹಣ ವಾಪಸ್ ಖಾತೆಗೆ ಬರಬೇಕು. ಒಂದು ವೇಳೆ ಇದು ಸಾಧ್ಯವಾಗಿಲ್ಲವೆಂದಾದ್ರೆ ಸೇವಾ ಪೂರೈಕೆದಾರರಿಗೆ ದೂರು ನೀಡಬೇಕು. ದೂರು ನೀಡಿದ್ದರೂ ಬ್ಯಾಂಕಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದಾದ್ರೆ ರಿಸರ್ವ್ ಬ್ಯಾಂಕಿನ 2019 ರ ಡಿಜಿಟಲ್ ವಹಿವಾಟಿನ ಒಂಬುಡ್ಸ್ಮನ್ ಯೋಜನೆಯಡಿ ದೂರು ನೀಡಬೇಕಾಗುತ್ತದೆ.