ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರಿತಂತೆ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ನಾಯಕರು. ಆದರೆ ಮಾಲೀಕರಲ್ಲ. ಅಲ್ಲದೆ ಉತ್ತರಾಧಿಕಾರಿ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ ಎಂದು ಹೇಳುವ ಮೂಲಕ ಕೆಲವರು ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಮುಂದಿನ ಉತ್ತರಾಧಿಕಾರಿ ಎಂಬಂತೆ ಬಿಂಬಿಸುತ್ತಿರುವುದರ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ.
ಸಿಎಂ ವಿರುದ್ಧ ಪತ್ರ ಬರೆದ ಸಚಿವ ಈಶ್ವರಪ್ಪ ನಡೆಗೆ ಬಿಜೆಪಿ ಹಿರಿಯ ನಾಯಕ ತೀವ್ರ ಆಕ್ಷೇಪ..?
ಮುಂದುವರೆದು ಮಾತನಾಡಿರುವ ಸಿ.ಟಿ. ರವಿ, ಕಾರ್ಯಕರ್ತರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಸಿಗುತ್ತದೆ. ಇದಕ್ಕೆ ಉದಾಹರಣೆ ತಾವೇ ಎಂದ ಅವರು, ಒಂದು ಕಾಲದಲ್ಲಿ ಕರಪತ್ರ ಹಂಚುತ್ತಿದ್ದ ನಾನು ಈಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ ಎಂದಿದ್ದಾರೆ.
ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರದಲ್ಲಿನ ಹಸ್ತಕ್ಷೇಪದ ಕುರಿತು ನಿರಂತರವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ ಸಚಿವ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹೀಗಾಗಿ ಸಿ.ಟಿ. ರವಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.