ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ, ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ ಕಾಂಗ್ರೆಸ್ ಗೆ ವಿದಾಯ ಹೇಳಿ ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ. ಬೆಳಗಾವಿ ಉಪಚುನಾವಣೆಗೆ ಕೆಲದಿನಗಳು ಬಾಕಿ ಇರುವ ಬೆನ್ನಲ್ಲೇ ಲಖನ್ ಜಾರಕಿಹೊಳಿ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದು, ಬಿಜೆಪಿಯಿಂದ ದಿ.ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಕಣಕ್ಕಿಳಿದಿದ್ದಾರೆ. ಈ ಹಿನ್ನೆಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬೆಳಗಾವಿ ಉಪಕದನ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ರಾಜೀನಾಮೆ
ಈ ನಡುವೆ ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ ಏಕಾಏಕಿ ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ. ಇಂದು ಸಚಿವರಾದ ಜಗದೀಶ್ ಹೆಟ್ಟರ್, ಉಮೇಶ್ ಕತ್ತಿ, ಭೈರತಿ ಬಸವರಾಜ್ ಭೇಟಿಯಾಗಿ, ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದು, ಇದಕ್ಕೆ ಲಖನ್ ಸಮ್ಮತಿ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಲಖನ್ ಜಾರಕಿಹೊಳಿ ಉಪಚುನಾವಣೆಯಲ್ಲಿ ತಾವು ಬಿಜೆಪಿಗೆ ಬೆಂಬಲಿಸುತ್ತಿದ್ದು, ಪಕ್ಷ ಸೇರ್ಪಡೆ ಬಗ್ಗೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದರು. ಇನ್ನು ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿಗೆ ಟಿಕೆಟ್ ನೀಡಿದ್ದು ಯಾಕೆಂದು ಅರ್ಥವಾಗುತ್ತಿಲ್ಲ. ಅವರ ಪರ ಪ್ರಚಾರ ಮಾಡಲು ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ.