ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ನಡುವೆ ಮುನಿಸು ಮುಂದುವರೆದಿದೆ.
ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರೂ ಯಡಿಯೂರಪ್ಪ ಮತ್ತು ಈಶ್ವರಪ್ಪ ಮಾತನಾಡದೆ ಮುನಿಸಿಕೊಂಡಿದ್ದಾರೆ. ಹರಿಹರದ ಬೆಳ್ಳೂಡಿ ಕನಕ ಗುರುಪೀಠದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದ್ದು, ಈ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಕೂಡ ಭಾಗಿಯಾಗಿದ್ದಾರೆ. ಉಭಯ ನಾಯಕರು ಒಂದೇ ಕಡೆ ಇದ್ದರೂ ಮಾತುಕತೆ ಇಲ್ಲದೆ ಅಂತರ ಕಾಯ್ದುಕೊಂಡಿದ್ದಾರೆ.
ಸಿಎಂ ಅನಗತ್ಯವಾಗಿ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿ ರಾಜ್ಯಪಾಲರು ಹಾಗೂ ಪಕ್ಷದ ಹಿರಿಯ ನಾಯಕರಿಗೆ ಪತ್ರ ಬರೆದಿದ್ದು, ಇದಕ್ಕೆ ಬಿ.ಎಸ್.ವೈ. ಬೆಂಬಲಿಗರಿಂದ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು, ಖಾತೆ ಬದಲಿಸಬೇಕೆಂದು ಸಹಿ ಸಂಗ್ರಹ ನಡೆಸಲಾಗಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಈಶ್ವರಪ್ಪ ಜಗ್ಗಲ್ಲ, ಬಗ್ಗಲ್ಲ ಎಂದು ಹೇಳಿದ್ದರು.
ಪ್ರತಿಪಕ್ಷ ನಾಯಕರು ಸಿಎಂ ರಾಜೀನಾಮೆ ನೀಡಬೇಕು, ಈಶ್ವರಪ್ಪರನ್ನು ವಜಾಗೊಳಿಸಬೇಕು, ಸರ್ಕಾರ ವಜಾ ಮಾಡಬೇಕೆಂದು ಒತ್ತಾಯಿಸಿದ್ದರು. ಪತ್ರದ ಬೆಳವಣಿಗೆ ನಂತರ ಇಂದು ಯಡಿಯೂರಪ್ಪ ಮತ್ತು ಈಶ್ವರಪ್ಪ ಮುಖಾಮುಖಿಯಾದರೂ ಮಾತನಾಡದೇ ಮುನಿಸು ಮುಂದುವರೆಸಿದ್ದಾರೆ.