ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಜಾರಿ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಇಡೀ ಕನ್ನಡ ಚಿತ್ರರಂಗ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ಕ್ರಮವನ್ನು ಖಂಡಿಸಿರುವ ನಿರ್ಮಾಪಕ ಕೆ.ಮಂಜು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದು, ಖಾತೆ ನಿಭಾಯಿಸುವ ಸಾಮರ್ಥ್ಯವಿಲ್ಲದಿದ್ದರೆ ಅವರಿಗೆ ಬೇರೆ ಖಾತೆ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ಕೆ.ಮಂಜು, ಕೊರೊನಾ ನಿಯಂತ್ರಿಸಲು ಆರೋಗ್ಯ ಸಚಿವರಿಗೆ ಚಿತ್ರರಂಗ ಮಾತ್ರ ಕಾಣುತ್ತಿದೆಯೇ? ಚಿತ್ರರಂಗವೆಂದರೆ ಏನಂದುಕೊಂಡಿದ್ದೀರಾ? ಜಿಮ್, ಚಿತ್ರರಂಗ ಮಾತ್ರ ಯಾಕೆ ಟಾರ್ಗೆಟ್ ಮಾಡುತ್ತೀದ್ದೀರಾ? ಎಂದು ಕಿಡಿಕಾರಿದ್ದಾರೆ.
ನಿಯಮಗಳನ್ನು ಜಾರಿಗೆ ತರಲು ನಿಮಗೆ ಮಾರ್ಕೆಟ್ ಗಳು ಕಾಣುವುದಿಲ್ಲವೇ? ರಾಜಕೀಯ ರ್ಯಾಲಿಗಳು ಕಾಣುತ್ತಿಲ್ಲವೇ? ಅಲ್ಲೆಲ್ಲ ಜನರು ತುಂಬಿ ತುಳುಕುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚಿತ್ರಮಂದಿರಗಳಿಗೆ ಮಾತ್ರ ಯಾಕೆ ರೂಲ್ಸ್ ಮಾಡುತ್ತಿದ್ದೀರಾ? ಏಕಾಏಕಿ ಈ ರೀತಿ ನಿರ್ಧಾರ ಕೈಗೊಳ್ಳುವುದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಿದೆ. ನಿಮ್ಮ ನಿರ್ಧಾರದಿಂದ 40-50 ಕೋಟಿ ನಷ್ಟವುಂಟಾಗುತ್ತಿದೆ. ಈ ನಷ್ಟವನ್ನು ಸಚಿವ ಸುಧಾಕರ್ ಅವರು ತುಂಬಿಕೊಡಲು ಸಾಧ್ಯವೇ? ಸರ್ಕಾರ ತುಂಬಿಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಕನ್ನಡದ ಹಾಡಿಗೆ ಧ್ವನಿಗೂಡಿಸಿದ ಮಂಗ್ಲಿ
ಒಂದು ವರ್ಷ ಚಿತ್ರರಂಗವೇ ಸ್ಥಬ್ಧವಾಗಿತ್ತು. ಈಗಷ್ಟೇ ಸಿನಿಮಾ ಬಿಡುಗಡೆಯಾಗುತ್ತಿದೆ, ಚೇತರಿಸಿಕೊಳ್ಳುತ್ತಿದ್ದೇವೆ. ನಾವು ಸಾಲ ಮಾಡಿ ಚಿತ್ರಗಳನ್ನು ಮಾಡುತ್ತೇವೆ ತೆರಿಗೆ ಕಟ್ಟಲು, ಬಾಡಿಗೆ ಹಣ ನೀಡಲು ಪರದಾಡುತ್ತಿದ್ದೇವೆ. ನಾವೆಲ್ಲ ಸಾಯುವ ಸ್ಥಿತಿ ಬಂದಿದೆ. ಇಂಥಹ ಸಂದರ್ಭದಲ್ಲಿ ಶೇ.50ರಷ್ಟು ನಿಯಮ ಜಾರಿಗೆ ತರುವುದು ಅನ್ಯಾಯ.
ಯುವರತ್ನ ಚಿತ್ರ ಗುರುವಾರವಷ್ಟೇ ಬಿಡುಗಡೆಯಾಯಿತು. ಶುಕ್ರವಾರ ಸಚಿವರು ಎಲ್ಲೋ ಕುಳಿತು ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಎಂದು ನಿಯಮ ಜಾರಿಗೆ ತಂದರು. ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘ, ವಾರ್ತಾ ಇಲಾಖೆ ಯಾರನ್ನೂ ಕೇಳದೇ ಚರ್ಚಿಸದೇ ಏಕಾಏಕಿ ಈ ನಿರ್ಧಾರ ಪ್ರಕಟಿಸಿದರು. ಸುಧಾಕರ್ ಅವರಿಗೆ ಖಾತೆ ನಿಭಾಯಿಸುವ ಶಕ್ತಿಯಿಲ್ಲವೆಂದಾದರೆ ದಯವಿಟ್ಟು ಸಿಎಂ ಯಡಿಯೂರಪ್ಪನವರು ಅವರ ಖಾತೆ ಬದಲಾಯಿಸಿ ಸಮರ್ಥರನ್ನು ಆರೋಗ್ಯ ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಸರ್ಕಾರ ತಕ್ಷಣ ಶೇ.50ರ ನಿರ್ಧಾರ ಹಿಂಪಡೆಯಬೇಕು. ಇಲ್ಲವಾದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ನಿವಾಸದ ಎದುರು ಇಡೀ ಚಿತ್ರರಂಗ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.