ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಇನ್ಮುಂದೆ ಬ್ಯಾಗೇಜ್ ಬಗ್ಗೆ ಹೆಚ್ಚು ತಲೆಬಿಸಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಇಂಡಿಗೊ ಪ್ರಯಾಣಿಕರಿಗೆ ಮನೆ-ಮನೆಗೆ ಬ್ಯಾಗೇಜ್ ವರ್ಗಾವಣೆ ಸೇವೆ ನೀಡಲು ಮುಂದಾಗಿದೆ. ಮನೆಯಿಂದ ಪ್ರಯಾಣಿಕರು ತಲುಪುವ ಸ್ಥಳಕ್ಕೆ ಬ್ಯಾಗೇಜ್ ತಲುಪಿಸುವ ಜವಾಬ್ದಾರಿಯನ್ನು ಇಂಡಿಗೊ ವಹಿಸಿಕೊಳ್ಳಲಿದೆ.
ಏಪ್ರಿಲ್ 1 ರಿಂದ ನವದೆಹಲಿ ಮತ್ತು ಹೈದರಾಬಾದ್ನಲ್ಲಿ ಸದ್ಯ ಈ ಸೇವೆ ಶುರುವಾಗಿದೆ. ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶೀಘ್ರವೇ ಸೇವೆ ಶುರುವಾಗಲಿದೆ. ಕಂಪನಿ ಇದಕ್ಕಾಗಿ ಕಾರ್ಟರ್ ಪೋರ್ಟ್ ಟರ್ಮಿನಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಪ್ರಯಾಣಿಕರು ಚಿಂತೆಯಿಲ್ಲದೆ ಪ್ರಯಾಣ ಬೆಳೆಸಲು ಇದು ನೆರವಾಗಲಿದೆ ಎಂದು ಕಂಪನಿ ಹೇಳಿದೆ.
ಚೆಕ್ ಇನ್ ಕೌಂಟರ್ ಹಾಗೂ ಭದ್ರತಾ ಪರೀಕ್ಷೆ ಇದ್ರಿಂದ ಬೇಗ ಮುಗಿಯಲಿದೆ. ಬ್ಯಾಗೇಜ್ ಡೆಲಿವರಿ ಕೌಂಟರ್ ನಲ್ಲಿ ಕಾಯುವ ಅಗತ್ಯವಿರುವುದಿಲ್ಲ. ಪ್ರಯಾಣಿಕ ಮನೆ ಬದಲು ಬೇರೆ ಸ್ಥಳವನ್ನು ಸೂಚಿಸಿದ್ರೆ ಅಲ್ಲಿಗೆ ಬ್ಯಾಗೇಜ್ ತಲುಪಲಿದೆ. ಇಂಡಿಗೊ ಇದಕ್ಕೆ 6EBagport ಎಂದು ಹೆಸರಿಟ್ಟಿದೆ. ಪ್ರಯಾಣಿಕರು ಪ್ರಯಾಣದ 24 ಗಂಟೆ ಮೊದಲು ಬುಕ್ಕಿಂಗ್ ಮಾಡಬೇಕಾಗುತ್ತದೆ.