ಪುದುಚೇರಿ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಧಾರ್ ಮಾಹಿತಿಯನ್ನು ಕಳವು ಮಾಡಿ ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಮತ್ತು ಚುನಾವಣಾ ಆಯೋಗಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.
ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಚಾರಕ್ಕಾಗಿ ಆಧಾರ್ ಮಾಹಿತಿಗಳನ್ನು ಬಳಸಿಕೊಳ್ಳಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿಲ್ಲ. ಹೀಗಾಗಿ ಪಕ್ಷದ ಗೆಲುವಿಗೆ ವಿಧಾನಸಭೆ ಚುನಾವಣೆಯಲ್ಲಿ ಆಧಾರ್ ಮಾಹಿತಿಯನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂದುದೂರಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಡಿಎಐ ಮತ್ತು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಚುನಾವಣೆ ಪ್ರಚಾರಕ್ಕೆ ಆಧಾರ್ ಮಾಹಿತಿ ಬಳಸಿಕೊಳ್ಳುವುದು ಅಕ್ಷಮ್ಯವಾಗಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರು ಮಧ್ಯಂತರ ಆದೇಶ ಹೊರಡಿಸಿ ನಿರ್ದೇಶನ ನೀಡಿದ್ದಾರೆ..
ಆಧಾರ್ ಗಾಗಿ ಜನರು ನೀಡಿದ ಮಾಹಿತಿಯನ್ನು ಯುಐಡಿಎಐ ರಕ್ಷಿಸುವಲ್ಲಿ ವಿಫಲವಾಗಿದೆಯೇ ಎಂಬುದರ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಲು ಅಧಿಕಾರಿಗಳು ಸಮಯ ಕೇಳಿದ್ದು ಆರು ವಾರ ಸಮಯ ನೀಡಲಾಗಿದೆ.