ಭಾರತೀಯ ರೈಲ್ವೆ ಇಲಾಖೆ 10 ವರ್ಷಗಳ ಹಳೆ ಪ್ರಕರಣವೊಂದರಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಪ್ರಕರಣ ಇತ್ಯರ್ಥಗೊಳಿಸಿದ ರಾಷ್ಟ್ರೀಯ ವಿವಾದ ಪರಿಹಾರ ಆಯೋಗವು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸೆಪ್ಟೆಂಬರ್ 2010 ರಲ್ಲಿ ಪ್ರಕರಣ ನಡೆದಿತ್ತು. ರೈಲಿನ ಕೆಳ ಸೀಟು ಖಾಲಿಯಿದ್ದರೂ ವೃದ್ಧ ದಂಪತಿಗೆ ಸೀಟು ನೀಡಿರಲಿಲ್ಲ.
ವಯಸ್ಸಾದ ದಂಪತಿಗಳು ಸೆಪ್ಟೆಂಬರ್ 4, 2010 ರಂದು ಸೋಲಾಪುರದಿಂದ ಬೀರೂರಿಗೆ ಹೋಗಲು ವಿಕಲಾಂಗ ಕೋಟಾದ ಮೂರನೇ ಎಸಿ ಬೋಗಿಯಲ್ಲಿ ಆಸನವನ್ನು ಕಾಯ್ದಿರಿಸಿದ್ದರು. ಆದರೆ ಅವರಿಗೆ ಕೆಳಗಿನ ಸೀಟ್ ನೀಡಿರಲಿಲ್ಲ. ಪ್ರಯಾಣದ ಸಮಯದಲ್ಲಿ ದಂಪತಿ ಟಿಟಿಇಗೆ ಕೆಳಗಿನ ಬರ್ತ್ ನೀಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಆಗಲೂ ಅವರಿಗೆ ಕೆಳಗಿನ ಬರ್ತ್ ನೀಡಲಿಲ್ಲ. ಹಾಗಾಗಿ ಕೆಳಗೆ ಕುಳಿತಿದ್ದ ದಂಪತಿಗೆ ಪ್ರಯಾಣಿಕರೊಬ್ಬರು ತಮ್ಮ ಸೀಟ್ ನೀಡಿದ್ದರು.
ಇಷ್ಟೇ ಅಲ್ಲದೆ, ದಂಪತಿಯನ್ನು ಬೀರೂರಿನ ಬದಲು 100 ಕಿಲೋಮೀಟರ್ ಹಿಂದೆಯೇ ಇಳಿಸಲಾಗಿದೆ. ಇದಾದ ನಂತ್ರ ವೃದ್ಧ ದಂಪತಿ ಭಾರತೀಯ ರೈಲ್ವೆ ವಿರುದ್ಧ ದೂರು ನೀಡಿದ್ದರು. ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರು ಕೆಳಗಿನ ಬರ್ತ್ ಆಯ್ಕೆ ಮಾಡಿಕೊಳ್ಳದೆ ಹೋದರೂ ಗಣಕೀಕೃತ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯಲ್ಲಿ ಕೆಳಗಿನ ಬರ್ತ್ ನೀಡಬೇಕು. ಪ್ರಯಾಣದ ಸಮಯದಲ್ಲಿ ಕೆಳ ಬರ್ತ್ ಖಾಲಿಯಾಗಿದ್ದರೆ ಟಿಕೆಟ್ ಪರಿಶೀಲನಾ ಸಿಬ್ಬಂದಿ ವಿಕಲಾಂಗರು, ಹಿರಿಯ ನಾಗರಿಕರು, ಗರ್ಭಿಣಿಯರಿಗೆ ಕೆಳಗಿನ ಬರ್ತ್ ನೀಡಬೇಕು.
ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ವಿವಾದ ಪರಿಹಾರ ಆಯೋಗ, ರೈಲ್ವೆ ಇಲಾಖೆಯ ನಿರ್ಲಕ್ಷ್ಯಕ್ಕೆ 3 ಲಕ್ಷ 2 ಸಾವಿರ ದಂಡ ಹಾಗೂ 2500 ರೂಪಾಯಿ ದಾವೆ ವೆಚ್ಚ ಪಾವತಿಸಲು ಸೂಚನೆ ನೀಡಿದೆ.