ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಹೃದಯಭಾಗದಲ್ಲಿ ಕುಧಾರ ಎಂಬ ನಿರ್ಜನ ಪಟ್ಟಣವಿದೆ. 13ನೇ ಶತಮಾನದಲ್ಲಿ ಸ್ಥಾಪನೆಯಾದ ಈ ನಗರ ಒಂದು ಕಾಲದಲ್ಲಿ ಸಮೃದ್ಧ ಪ್ರದೇಶವಾಗಿತ್ತು. ಆದರೆ 19ನೇ ಶತಮಾನದಲ್ಲಿ ಗ್ರಾಮಸ್ಥರು ಈ ಊರನ್ನ ತ್ಯಜಿಸಿದ ಬಳಿಕ ಇದು ನಿರ್ಜನವಾಗಿದೆ.
ಆದರೆ ಈ ಪಟ್ಟಣದಲ್ಲಿ ಈಗಲೂ ಕೂಡ ಓರ್ವ ನಿವಾಸಿ ಇದ್ದಾರೆ. 82 ವರ್ಷದ ಈ ದ್ವಾರ ಪಾಲಕ ತನ್ನ ಜೀವನದ ಮೊದಲ ಪ್ರೀತಿಯನ್ನ ಇದೇ ಪಟ್ಟಣದಲ್ಲಿ ಕಂಡಿದ್ದರಂತೆ.
ಅಂದಹಾಗೆ ಈ 82 ವರ್ಷದ ವೃದ್ಧನಿಗೆ ಮೊದಲ ಪ್ರೀತಿಯಾಗಿದ್ದು ಆಸ್ಟ್ರೇಲಿಯಾದ ಮಹಿಳೆಯ ಮೇಲೆ. ನಾನು ಮೊದಲು ಮರೀನಾಳನ್ನ ಭೇಟಿಯಾಗಿದ್ದಾಗ ನನಗೆ ವಯಸ್ಸು 30. ಮರೀನಾ ಐದು ದಿನಗಳ ಪ್ರವಾಸಕ್ಕೆಂದು ಆಸ್ಟ್ರೇಲಿಯಾದಿಂದ ರಾಜಸ್ಥಾನಕ್ಕೆ ಬಂದಿದ್ದಳು. ನಾನು ಆಕೆಗೆ ಒಂಟೆ ಸವಾರಿ ಹೇಗೆ ಮಾಡೋದೆಂದು ಕಲಿಸಿದೆ. ಅದು 1970ರ ದಶಕ. ಆಗೆಲ್ಲ ಮೊದಲ ನೋಟದಲ್ಲೇ ನಿಜವಾದ ಪ್ರೀತಿ ಆಗುತ್ತಿತ್ತು. ಪ್ರವಾಸದುದ್ದಕ್ಕೂ ನಾವು ಒಟ್ಟಿಗೆ ಇರುತ್ತಿದ್ದೆವು. ಆಕೆ ನನಗೆ ಐ ಲವ್ ಯೂ ಅಂತಲೂ ಹೇಳಿದ್ದಳು ಅಂತಾ ರಾಜಸ್ಥಾನದ ವೃದ್ಧ ತನ್ನ ಪ್ರೀತಿಯ ಕತೆಯನ್ನ ಬಿಚ್ಚಿಟ್ಟಿದ್ದಾರೆ.
ಆಸ್ಟ್ರೇಲಿಯಾಗೆ ವಾಪಸ್ಸಾದ ಬಳಿಕವೂ ಮರೀನಾ ಈತನ ಜೊತೆ ಸಂಪರ್ಕದಲ್ಲಿದ್ದಳು, ಅಲ್ಲದೇ ಆಸ್ಟ್ರೇಲಿಯಾಗೂ ಆಹ್ವಾನಿಸಿದ್ದಳು. ಗೇಟ್ಕೀಪರ್ ಆಗಿದ್ದ ಈ ವ್ಯಕ್ತಿ 30 ಸಾವಿರ ರೂಪಾಯಿಗಳನ್ನ ಹೊಂದಿಸಿ ಆಸ್ಟ್ರೇಲಿಯಾಗೆ ತೆರಳಿದ್ದು ಮಾತ್ರವಲ್ಲದೇ 3 ತಿಂಗಳುಗಳ ಕಾಲ ಮರಿನಾ ಜೊತೆಯಲ್ಲಿದ್ದರು. ಆದರೆ ಮದುವೆ ವಿಚಾರ ಬಂದ ಬಳಿಕ ಪರಿಸ್ಥಿತಿ ಕೈಮೀರುತ್ತಾ ಹೋಯ್ತು.
ನಾನು ನನ್ನ ತಾಯ್ನಾಡನ್ನ ಬಿಟ್ಟು ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲಸಲು ಸಿದ್ಧನಿರಲಿಲ್ಲ. ಹೀಗಾಗಿ ನಾನಿದನ್ನು ಆಕೆಯ ಬಳಿ ಹೇಳಿದೆ. ಆಕೆ ನನ್ನನ್ನ ಬಿಟ್ಟ ದಿನ ಸಿಕ್ಕಾಪಟ್ಟೆ ಅತ್ತಿದ್ದಳು ಅನ್ನೋದನ್ನ ಗೇಟ್ಕೀಪರ್ ನೆನೆಸಿಕೊಂಡರು.
ಆದರೆ ಮರೀನಾ ಈಗ ಹೇಗಿದ್ದಾಳೆ. ಏನಾಗಿದ್ದಾಳೆ ಎನ್ನೋದು ಗೇಟ್ಕೀಪರ್ಗೂ ತಿಳಿದಿಲ್ಲ. ಆಕೆ ನನ್ನನ್ನ ಇನ್ನೂ ನೆನಪಲ್ಲಿ ಇಟ್ಟುಕೊಂಡಿದ್ದಾಳಾ..? ಕುಟುಂಬಸ್ಥರ ಒತ್ತಾಯದ ಮೇರೆಗೆ ಆಕೆಗೆ ಮದುವೆಯಾಯಿತಾ..? ಹೀಗೆ ಸಾಕಷ್ಟು ಪ್ರಶ್ನೆಗಳು ಗೇಟ್ಕೀಪರ್ ಮನಸ್ಸಲ್ಲಿ ಮೂಡಿದ್ದವಂತೆ. ರಾಜಸ್ಥಾನದ ಈ ವೃದ್ಧನಿಗೆ ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ.
ಆದರೆ ಕತೆ ಇಲ್ಲಿಗೆ ಮುಗಿದಿಲ್ಲ. ಮರೀನಾರನ್ನ ಮೊದಲು ಭೇಟಿಯಾಗಿ 50 ವರ್ಷ ಕಳೆದ ಬಳಿಕ ಅಂದರೆ 2 ತಿಂಗಳ ಹಿಂದೆ ಮತ್ತೆ ಮರೀನಾರಿಂದ ಪತ್ರವೊಂದನ್ನ ಸ್ವೀಕರಿಸಿದ್ರು. ಈ ಪತ್ರದಲ್ಲಿ ಆಕೆ ತಾನು ಇನ್ನೂ ಮದುವೆಯಾಗಿಲ್ಲ ಎಂದೂ ಭಾರತಕ್ಕೆ ವಾಪಸ್ ಆಗುತ್ತಿರೋದಾಗಿಯೂ ಹೇಳಿದ್ದಳು. ಅಲ್ಲಿಂದ ಈ ಗೇಟ್ಕೀಪರ್ ತನ್ನ ಮೊದಲ ಪ್ರೀತಿಯೊಂದಿಗೆ ಮತ್ತೊಮ್ಮೆ ಸಂಪರ್ಕ ಬೆಳೆಸಿದ್ರು.