ಮೊಬೈಲ್ ಬಳಕೆದಾರರ ಸಂಖ್ಯೆ ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆದರೆ ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸುವುದರಿಂದ ತೊಂದರೆ ಉಂಟಾಗಬಹುದಾದ ಸಾಧ್ಯತೆ ಇದೆ.
ಹೌದು, ಸ್ಮಾರ್ಟ್ ಫೋನ್ ಗಳನ್ನು ಕತ್ತಲಲ್ಲಿ ಬಳಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಸ್ಮಾರ್ಟ್ ಫೋನ್ ಬೆಳಕು ಕಣ್ಣುಗಳಿಗೆ ತೊಂದರೆ ಉಂಟುಮಾಡುವುದಲ್ಲದೇ, ಮೆದುಳು ಹಾಗೂ ದೇಹದ ಮೇಲೆಯೂ ಪರಿಣಾಮ ಬೀರಬಹುದಾಗಿದೆ.
ನಿದ್ದೆಗೆ ಸಂಬಂಧಿಸಿದ ಮೆಲಟೊನಿನ್ ಹಾರ್ಮೋನ್ ಅನ್ನು ಸ್ಮಾರ್ಟ್ ಬೆಳಕು ತೊಂದರೆಗೀಡು ಮಾಡುತ್ತದೆ. ಇದರಿಂದ ನಿದ್ದೆ ಏರುಪೇರಾಗಿ ಆರೋಗ್ಯದ ಸಮಸ್ಯೆಯೂ ಉಂಟಾಗಬಹುದು. ಅಲ್ಲದೇ, ಸ್ಮಾರ್ಟ್ ಫೋನ್ ಬೆಳಕು ಹಸಿವಿನ ಹಾರ್ಮೋನ್ ಮೇಲೆ ಪರಿಣಾಮ ಬೀರುವುದರಿಂದ ಪರೋಕ್ಷ ರೀತಿಯಲ್ಲಿ ಬೊಜ್ಜು ಬರಬಹುದು. ವಿಶ್ರಾಂತಿ, ನಿದ್ದೆಯ ಸಮಯದಲ್ಲಿ ಸ್ಮಾರ್ಟ್ ಫೋನ್ ನೋಡುವುದರಿಂದ ಮೆದುಳಿಗೆ ಗೊಂದಲ ಉಂಟಾಗುತ್ತದೆ.
ರಾತ್ರಿ ಹೆಚ್ಚು ಹೊತ್ತು ಸ್ಮಾರ್ಟ್ ಫೋನ್ ನೋಡಿದಲ್ಲಿ ಗ್ರಹಿಕೆ, ಸ್ಮರಣ ಶಕ್ತಿ ಕಡಿಮೆಯಾಗುತ್ತದೆ. ನಿದ್ದೆ ಕಡಿಮೆಯಾದಲ್ಲಿ ಒತ್ತಡ, ಖಿನ್ನತೆ ಬರುವ ಸಾಧ್ಯತೆ ಇದೆ. ಇಷ್ಟು ಮಾತ್ರವಲ್ಲ, ಸ್ಮಾರ್ಟ್ ಫೋನ್ ರಾತ್ರಿಯಲ್ಲಿ ಅತಿಯಾಗಿ ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.