ನವದೆಹಲಿ: ಮೇ ತಿಂಗಳ ಬಿಸಿಲ ತಾಪ ಈಗಲೇ ಶುರುವಾಗಿದೆ. ಬಿಸಿಲ ಪ್ರಖರತೆಗೆ ಜನ ತತ್ತರಿಸಿಹೋಗಿದ್ದಾರೆ. ತಾಪಮಾನ ಹೆಚ್ಚಾಗಿ ಮುಂದಿನ ಮೇ ತಿಂಗಳ ಅಂತ್ಯದವರೆಗೆ ಬೇಸಿಗೆಯ ಬಿಸಿ ತೀವ್ರವಾಗಿ ಇರಲಿದೆ ಎಂದು ಹೇಳಲಾಗಿದೆ.
ಉಷ್ಣಮಾರುತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಜಸ್ಥಾನದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ದೆಹಲಿಯಲ್ಲಿ 40.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, 76 ವರ್ಷಗಳಲ್ಲಿಯೇ ಗರಿಷ್ಠ ತಾಪಮಾನ ಇದಾಗಿದೆ. ಭಾರತೀಯ ಹವಾಮಾನ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದ್ದು, ಮುಂದಿನ ಎರಡು ತಿಂಗಳು ದೇಶದ ಬಹುತೇಕ ನಗರಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಲಾಗಲಿದೆ. ಉಷ್ಣ ಮಾರುತ ಹಿಂದೆಂದಿಗಿಂತಲೂ ಹೆಚ್ಚಾಗಿ ಬೀಸಲಿದೆ ಎಂದು ತಿಳಿಸಿದೆ. ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಬಿಸಿಗಾಳಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿಯೂ ಬಿಸಿಲಿನ ಬೇಗೆ ತೀವ್ರವಾಗತೊಡಗಿದೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷದ ನಂತರ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಹೆಚ್ಚಾಗಿದೆ. ಕಲ್ಬುರ್ಗಿಯಲ್ಲಿ 41.6, ರಾಯಚೂರಿನಲ್ಲಿ 41, ವಿಜಯಪುರದಲ್ಲಿ 40, ಕೊಪ್ಪಳದಲ್ಲಿ 39.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಒಣಹವೆ ಮತ್ತು ದಕ್ಷಿಣ ಭಾಗಕ್ಕೆ ಬೀಸುತ್ತಿರುವ ಬಿಸಿಗಾಳಿಯಿಂದ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ ಎಂದು ಹೇಳಲಾಗಿದೆ.