ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಎಸ್ಐಟಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಸಂತ್ರಸ್ತ ಯುವತಿ ವಿಡಿಯೋ ವೈರಲ್ ಆಗಲು ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಗದೀಶ್, ಸಂತ್ರಸ್ತ ಯುವತಿ ವಿಚಾರಣೆಗೆ ಹಾಜರಾದಾಗ ಎಸ್ಐಟಿ ಅಧಿಕಾರಿಗಳು ಕೋರ್ಟ್ ಆದೇಶವನ್ನೂ ಉಲ್ಲಂಘಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅಲ್ಲದೇ ಯುವತಿಯ ವಿಡಿಯೋವನ್ನು ಮಾಧ್ಯಮಗಳಿಗೂ ನೀಡಿದ್ದಾರೆ. ಸಂತ್ರಸ್ತೆಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಬೇಸರದ ಸಂಗತಿ. ವಿಚಾರಣೆ ನಡೆಸುತ್ತಿದ್ದ ಭ್ರಷ್ಟ ಪೊಲೀಸ್ ಅಧಿಕಾರಿಯೇ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಹೆಸರು ಪ್ರಸ್ತಾಪಿಸದೆ ಜಮೀರ್ ಅಹ್ಮದ್ ಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು
ಸಂತ್ರಸ್ತ ಯುವತಿಗೆ ಆಕೆಯ ಕುಟುಂಬದವರು ಕೈಬಿಟ್ಟಿದ್ದಾರೆ. ನಾನೇ ಓರ್ವ ಸಹೋದರನಾಗಿ ಯುವತಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇನೆ. ಪೊಲೀಸರು ಆರೋಪಿಗೇ ಸಹಾಯ ಮಾಡುತ್ತಾ ಆತನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ. ಇವೆಲ್ಲವನ್ನು ಕೋರ್ಟ್ ಗೆ ಸಲ್ಲಿಸುತ್ತೇನೆ. ಓರ್ವ ಹೆಣ್ಣು ಮಗಳನ್ನು ಖಾಸಗಿಯಾಗಿ ಕಾಪಾಡಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಆಕೆಯ ವಿಚಾರಣೆ ಮಾಡುವ ಸ್ಥಳದ ಬಗ್ಗೆಯೂ ನಾನು ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದರೆ ಕೆಲ ಪೊಲೀಸ್ ಅಧಿಕಾರಿಗಳೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಓರ್ವ ಹೆಣ್ಣುಮಗಳ ರಕ್ಷಣೆ ವಿಚಾರದಲ್ಲಿ ಮಾಧ್ಯಮಗಳಿಂದ ಹಿಡಿದು, ಪೊಲೀಸರು, ವಕೀಲರು ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಆದರೆ ಇಲ್ಲಿ ಹಾಗೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯುವತಿ ಪರವಾಗಿ ವಾದ ಮಾಡುತ್ತಿರುವುದಕ್ಕೆ ನನ್ನನ್ನು ರೌಡಿ ಶೀಟರ್ ಎಂದು ಬಿಂಬಿಸಲಾಗುತ್ತಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದೇನೆ ಆದರೂ ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ಎಲ್ಲದರ ಬಗ್ಗೆಯೂ ಕೋರ್ಟ್ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.